ಗಂಗೊಳ್ಳಿ, ಏ 25 (DaijiworldNews/SM): ತ್ರಾಸಿ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಪುನರಾರಂಭಗೊಂಡ ಯಾಂತ್ರೀಕೃತ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ತ್ರಾಸಿ, ಮೊವಾಡಿ, ಹೊಸಾಡು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ ಸುಮಾರು ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಹೂಳೆತ್ತುವ (ಮರಳುಗಾರಿಕೆ) ಕಾಮಗಾರಿ ಪುನರಾರಂಭಗೊಂಡ ಹಿನ್ನಲೆಯಲ್ಲಿ ಸ್ಥಳೀಯರು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮರಳು ಸಾಗಾಟದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವ ಭರವಸೆ ನೀಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಇದೇ ಸಂದರ್ಭ ಗುತ್ತಿಗೆದಾರರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಹೂಳೆತ್ತುವ ಕಾಮಗಾರಿಗೆ ಸಮ್ಮತಿ ಸೂಚಿಸಿಲ್ಲ. ಕಾಮಗಾರಿಗೆ ಸ್ಥಳೀಯರ ವಿರೋಧದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಕಂಪೆನಿಯು ತ್ರಾಸಿ ಹಾಗೂ ಹೊಸಾಡು ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಯಾಂತ್ರೀಕೃತ ಹೂಳೆತ್ತುವ ಕಾಮಗಾರಿಯನ್ನು ನಡೆಸುತ್ತಿತ್ತು. ಇದನ್ನು ವಿರೋಧಿಸಿದ ಸ್ಥಳೀಯ ತ್ರಾಸಿ, ಮೊವಾಡಿ ಹಾಗೂ ನಾಡ ಗುಡ್ಡೆಯಂಗಡಿ ಗ್ರಾಮಸ್ಥರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ (ಮಾ.21) ಬೃಹತ್ ಪ್ರತಿಭಟನೆ ನಡೆಸಿ ಯಾಂತ್ರೀಕೃತ ಹೂಳೆತ್ತುವ (ಮರಳುಗಾರಿಕೆ) ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹಾಗೂ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಅವರು ಹೂಳೆತ್ತುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೂಳೆತ್ತುವ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಗಣಿ ಇಲಾಖೆ ಅಧಿಕಾರಿ, ಬಿಜೆಪಿ ಬೈಂದೂರು ಮಂಡಲ ಮಾಜಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಶೆಟ್ಟಿ, ತಾಪಂ ಸದಸ್ಯ ಉಮೇಶ ಶೆಟ್ಟಿ ಕಲ್ಗದ್ದೆ, ಶ್ರೀಧರ ಬಡಾಕೆರೆ, ರಾಘವೇಂದ್ರ ಆಚಾರಿ, ಗುರುಕಿರಣ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಮಂಜುನಾಥ ಶೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.