ಕುಂದಾಪುರ ಡಿ 31(SM): ಕಳೆದ 40 ವರ್ಷಗಳ ದಲಿತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಕೈ ಜೋಡಿಸಿ ನಡೆಸಿದ ಹೋರಾಟಕ್ಕೆ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುವಲ್ಲಿ ಸಹಕರಿಸಿದ್ದಾರೆ.
ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ವಡೇರ ಹೋಬಳಿಯ ಅಂಬೇಡ್ಕರ್ ನಗರದಲ್ಲಿ 12 ದಲಿತ ಕುಟುಂಬಗಳು ಸುಮಾರು ನಲ್ವತ್ತೈದು ವರ್ಷಗಳಿಂದ ವಾಸಿಸುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಹಕ್ಕುಪತ್ರ ದೊರೆತಿರಲಿಲ್ಲ. ಇದರಿಂದಾಗಿ ಈ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವುದೂ ಕಷ್ಟ ಸಾಧ್ಯವಾಗಿತ್ತು. ಕಳೆದ ಹಲವು ವರ್ಷಗಳಿಂದ ಅವರು ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದರು. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ರಾಜು ಬೆಟ್ಟಿನಮನೆ ನೇತೃತ್ವದಲ್ಲಿ ಈ ಕುಟುಂಬಗಳ ಪರವಾಗಿ ಭೂಮಿ ಹಕ್ಕು ಹೋರಾಟ ನಡೆಸಲಾಯಿತು.
ಜಿಲ್ಲಾ ಮಟ್ಟದ ದಲಿತ ಕುಂದುಕೊರತೆ ಸಭೆಯಲ್ಲಿಯೂ ಈ ಬಗ್ಗೆ ಆಗ್ರಹಿಸಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಸೋಮವಾರ ಬೆಳಿಗ್ಗೆ ಕುಂದಾಪುರ ತಹಶೀಲ್ದಾರರ ಕಚೇರಿಯಲ್ಲಿ ಜಯಪ್ರಕಾಶ, ಕೆ.ಮೀನಾ, ಚಂದ್ರಕಲಾ, ವಸಮತಿ, ಶ್ಯಾಮಲಾ ಹಾಗು ಆಶಾ ಎಂಬ ಆರು ದಲಿತ ಕುಟುಂಬಗಳಿಗೆ 94ಸಿಸಿ ಅಡಿಯಲ್ಲಿ 2.75 ಸೆಂಟ್ಸ್ ಭೂಮಿ ಮಂಜೂರು ಮಾಡಿ ಹಕ್ಕು ಪತ್ರ ವಿತರಿಸಲಾಯಿತು. ಭೂಮಿ ಹಕ್ಕು ಪಡೆಯಲು ಸರ್ಕಾರಕ್ಕೆ ಕಟ್ಟಬೇಕಿರುವ ತಲಾ 5700 ರೂಪಾಯಿಗಳನ್ನು ಕಟ್ಟಲು ಕುಟುಂಬಗಳಿಗೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು ತಮ್ಮ ವಿಶೇಷ ಅಧಿಕಾರ ಬಳಸಿ ಎಸ್.ಸಿ-ಎಸ್.ಟಿ ನಿಧಿಯಿಂದ ಆರು ಕುಟುಂಬಗಳ ಪರವಾಗಿ 34,200 ರೂಪಾಯಿ ಪಾವತಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ಭೂಮಿ ಹಕ್ಕು ಹೋರಾಟಕ್ಕೆ ಬೆಂಬಲವಾಗಿ ನಿಂತವರು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್. ಕಳೆದ ನಲ್ವತ್ತು ವರ್ಷಗಳಿಂದ ಅಂಬೇಡ್ಕರ್ ಭವನದ ಹಿಂಬದಿಯ ಜಾಗದಲ್ಲಿ ದಲಿತ ಕುಟುಂಬಗಳು ವಾಸಿಸುತ್ತಿದ್ದರೂ, ಅದು ಹೇಗೋ ಒಂದಷ್ಟು ಒತ್ತುವರಿಯಾಗಿ ಬೇರೆಯವರ ಹೆಸರಿಗೆ ಮಂಜೂರಾಗಿತ್ತು. ಇನ್ನೊಂದಷ್ಟು ಭೂಮಿ ಪರಂಬೋಕು ಎಂಬುದಾಗಿ ನಮೂದಾಗಿತ್ತು. ಇದರಿಂದಾಗಿ ಇಲ್ಲಿ ವಾಸಿಸುತ್ತಿದ್ದ ನೈಜ ಫಲಾನುಭವಿಗಳಿಗೆ ಭೂಮಿ ಹಕ್ಕುಪತ್ರ ಎನ್ನುವುದು ಮರೀಚಿಕೆಯಾಗಿತ್ತು.
ಪರಿಸ್ಥಿತಿಯನ್ನು ಮನಗಂಡ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕುಂದಾಪುರದ ತಹಶೀಲ್ದಾರರ ಜೊತೆಗೆ ಮಾತುಕತೆ ನಡೆಸಿ ಒತ್ತುವರಿ ತೆರವುಗೊಳಿಸಿ ಆರು ಕುಟುಂಬಗಳಿಗೆ ಭೂಮಿ ಹಕ್ಕು ಪತ್ರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.