ಮಂಗಳೂರು, ಏ 25 (DaijiworldNews/MS): ಪಿಎಸ್ಐ ನೇಮಕಾತಿ ಹಗರಣ ಕುರಿತು ರಾಜ್ಯ ಸರಕಾರ ತನಿಖೆ ನಡೆಸಬೇಕು ಎಂದು ಶಾಸಕ ಯುಟಿ ಖಾದರ್ ಒತ್ತಾಯಿಸಿದರು.
ಏಪ್ರಿಲ್ 25 ರಂದು ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಯು ಟಿ ಖಾದರ್, ' ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಕಪ್ಪು ಪಟ್ಟಿಯಲ್ಲಿರುವ ಕಾಲೇಜನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಲು ಹೇಗೆ ಸಾಧ್ಯ. ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಮೀಲಾಗದಿದ್ದರೆ ಇಂತಹ ಭ್ರಷ್ಟಾಚಾರ ನಡೆಯಲು ಅಸಾಧ್ಯ. ನೇಮಕಾತಿ ಹಗರಣದ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಖಾದರ್ ಎಂದು ಒತ್ತಾಯಿಸಿದರು.
ಈ ಅಕ್ರಮಕ್ಕೆ ಕಾರಣರಾದವರ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡುವ ಬದಲು ಸಾರ್ವಜನಿಕ ಚರ್ಚೆ ಆಗುತ್ತಿರುವ ವಿಷಯವನ್ನು ಪ್ರಸ್ತಾಪ ಮಾಡಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕ ಡೊಮೈನ್ನಲ್ಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಸಿಐಡಿ ನೋಟಿಸ್ ನೀಡಿದೆ, ಇದು ಸರ್ಕಾರ ಮತ್ತು ಗುಪ್ತಚರ ವೈಫಲ್ಯವನ್ನು ತೋರಿಸುತ್ತದೆ. ಕಾಂಗ್ರೆಸ್ ಬೆದರಿಕೆಗೆ ಹೆದರುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಖಾದರ್, ‘ರಾಜ್ಯ ಸರ್ಕಾರಕ್ಕೆ ಯುವಕರಿಗೆ ಉದ್ಯೋಗ ಕಲ್ಪಿಸುವ ಕಾಳಜಿ ಇಲ್ಲ. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳುವ ರಾಜ್ಯ ಸರ್ಕಾರದ ಮೇಲೆ ಯುವಕರು ನಂಬಿಕೆ ಕಳೆದುಕೊಂಡಿದ್ದಾರೆ. ರಾಜ್ಯದ ಪರಿಸ್ಥಿತಿ ಕಂಡು ಹೂಡಿಕೆದಾರರನ್ನು ಹೂಡಿಕೆಯಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಆರೋಪಿಸಿದರು.