ಉಡುಪಿ, ಏ 25 (DaijiworldNews/HR): ರಾಜ್ಯದಲ್ಲೇ ಉಡುಪಿ ಎಂದರೆ ಸ್ವಚ್ಚ ಜಿಲ್ಲೆ ಎಂದು ಕಣ್ಮುಂದೆ ಬರುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಇದೆಯೇ ಎಂದರೆ ಈ ಮಠದಬೆಟ್ಟು ಭಾಗದ ಜನರನ್ನು ಕೇಳಿದರೆ, ನಗರಸಭೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆ ಭಾಗದಲ್ಲಿ ಮಾಡುತ್ತಿರುವ ಅವೈಜ್ಞಾನಿಕ ಕಾಮಗಾರಿ.
ಉಡುಪಿ ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಳಿ ಹೊಳೆಗೆ ಮಠದಬೆಟ್ಟುವಿನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಗಾಗಿ ತ್ಯಾಜ್ಯ ನೀರನ್ನು ತಡೆಹಿಡಿಯಲಾಗಿದ್ದು ಪಕ್ಕದಲ್ಲಿ ವಾಸಿಸುವ ನಿವಾಸಿಗಳಿಗೆ ನುಂಗಲಾರದ ತುತ್ತಾಗಿದೆ. ಮಕ್ಕಳು ಮನೆಯ ಬಾವಿಯ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ಸ್ಥಳೀಯರು ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಎಂಬಲ್ಲಿ ಇಂದ್ರಾಣಿ ಹೊಳೆಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಪಶ್ಚಿಮ ವಾಹಿನಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ.
ಅದಕ್ಕಾಗಿ ಹೊಳೆಗೆ ಅಡ್ಡಲಾಗಿ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದೆ. ಇನ್ನೊಂದೆಡೆ ನಗರಸಭೆಯಿಂದ ಡ್ರೈನೇಜ್ ನೀರನ್ನು ಇದೇ ಹೊಳೆಗೆ ಬಿಡಲಾಗುತ್ತಿದೆ. ಇದರಿಂದ ಸೇತುವೆ ನಿರ್ಮಾಣದ ಪ್ರದೇಶದಲ್ಲಿ ಡೈನೇಜ್ ನೀರು ಸಂಗ್ರಹ ಗೊಂಡಿದೆ. ಎರಡು ದಿನದಿಂದ ಸುರಿದ ಮಳೆಯಿಂದಾಗಿ ಹೊಳೆಯ ನೀರು ಹೆಚ್ಚಾಗಿ, ತ್ಯಾಜ್ಯ ನೀರು ಹೊಳೆಯನ್ನು ಸಂಪರ್ಕಿಸುವ ತೋಡುಗಳಲ್ಲಿ ಹರಿಯುತ್ತಿದ್ದು ಗಬ್ಬು ವಾಸನೆ ಬೀರುತ್ತದೆ. ಅಲ್ಲದೆ ಪಕ್ಕದ 30ಕ್ಕೂ ಅಧಿಕ ಮನೆಯ ಬಾವಿಗಳ ನೀರು ಕಲುಷಿತವಾಗಿದ್ದು ದಿನನಿತ್ಯದ ಬಳಕೆಗೂ ಸಿಗದಂತಾಗಿದೆ.
ಬೇಸಿಗೆಯ ಸಮಯದಲ್ಲಿ ತಳ ಸೇರಬೇಕಿದ್ದ ಬಾವಿಯ ನೀರು, ತ್ಯಾಜ್ಯದ ನೀರು ಸೇರಿಕೊಂಡು ನೀರಿನ ಮಟ್ಟ ಹೆಚ್ಚಾಗಿದೆ.
ಸುಮಾರು ೪೦ ವರ್ಷಗಳ ಹಿಂದೆ ಇಂದ್ರಾಣಿಯ ನದಿಯ ನೀರನ್ನು ಕುಡಿಯುತ್ತಿದೆವು ಅಷ್ಟು ಸ್ವಚ್ಛವಾಗಿತ್ತು. ಆದರೆ ಕ್ರಮೇಣ ನಗರಸಭೆಯ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ವೆಟ್ ವೆಲ್ ನೀರು ಸೇರಿ ಈಗ ವಿಷವಾಗಿ ಪರಿವರ್ತನೆ ಆಗಿದೆ.
ಅಷ್ಟೇ ಅಲ್ಲ, ಇಲ್ಲಿನ ಸ್ಥಳೀಯರು ತಮ್ಮ ಬಾವಿಯ ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ನಗರಸಭೆ ಇತ್ತ ನೋಡದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಇಲ್ಲಿ ಹೊರಗಡೆ ಓಡಾಡುವಂತಿಲ್ಲ ಕೆಟ್ಟ ವಾಸನೆ ಸುತ್ತಲೂ ಹರಡಿದೆ. ರಾತ್ರಿ ಅಲ್ಲ ಹಗಲಲ್ಲೆ ಸೊಳ್ಳೆ ಕಾಟ ತಡೆಯುವಂತಿಲ್ಲ. ಇನ್ನು ಡೆಂಗ್ಯೂ, ಮಲೇರಿಯಾ ಅದೆಂಥದ್ದಾದರೂ ಕಾಯಿಲೆಯಾದರೂ ಬರುವ ಭೀತಿಯಿದೆ.
"ಈ ಮಠದಬೆಟ್ಟುವಿನಲ್ಲಿ ಇಷ್ಟು ಸಮಸ್ಯೆ ಇದ್ದರೂ ಯಾವ ಸರಕಾರವೂ ಕೂಡ ಪರಿಹಾರ ನೀಡಿಲ್ಲ. ಇದು " ಸ್ವಚ್ಛ ಉಡುಪಿ " ಹೆಸರಿಗೇನೇ ಅಪವಾದ. ನಗರದ ಹೃದಯ ಭಾಗದಲ್ಲಿದ್ದು ಕೊಂಡು ಈ ಸಮಸ್ಯೆ ಎದುರಿಸುತ್ತಿದ್ದೇವೆ, ಇದು ದುರಂತ . ಈ ಬಾರಿಯೂ ಸಮಸ್ಯೆ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯನ್ನು ಖಂಡಿತಾ ಬಹಿಷ್ಕಾರ ಮಾಡುತ್ತೇವೆ', ಎಂದು ಸ್ಥಳೀಯರಾದ ಆಶಾ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
"ಇಷ್ಟು ದೊಡ್ಡ ಹೊಳೆಗೆ ಮಣ್ಣಿನ ಕಟ್ಟ ಹಾಕಿ ಸರಿಯಾಗಿ ನೀರು ಹರಿದು ಹೋಗಲು ಜಾಗ ಬಿಡದೆ, ಮಣ್ಣನ್ನು ಎತ್ತರದಲ್ಲಿ ಗುಡ್ಡೆ ಹಾಕಿದ್ದಾರೆ. ಒಂದು ದಿನದ ಮನೆಗೆ ನೀರು ತುಂಬಿಹೋಗಿದೆ. ಕೈ ತೋಡಿನಿಂದ ಬಾವಿಗೆ ಒಸರು ನೀರು ಸೇರುತ್ತಿದೆ. ನಗರಸಭೆಯ ಗಮನಕ್ಕೆ ತಂದರೂ ಕೂಡ ನಿರ್ಲಕ್ಷಿಸಲಾಗಿದೆ. ಹಿಂದೊಮ್ಮೆ ನಮ್ಮ ಮನೆಗೆ ನೀರು ತುಂಬಿ ಹೋಗಿತ್ತು . ಇನ್ನು ಸತತ ಮಳೆ ಬಂದರಂತೂ ಇಲ್ಲಿ ಪ್ರದೇಶ ನೀರು ತುಂಬಿಕೊಂಡು ಕೆಟ್ಟ ಪರಿಸ್ಥಿತಿ ಬರುತ್ತದೆ. ಚಿಕ್ಕ ಪುಟ್ಟ ಮಕ್ಕಳನ್ನು ಇಲ್ಲಿ ಬೆಳೆಸುವುದು ಸವಾಲಿನ ಕೆಲಸ', ಎಂದು ಸ್ಥಳೀಯರಾದ ಪ್ರವೀಣ್ ಮೆಂಡನ್ ಸ್ಥಿತಿಯನ್ನು ವಿವರಿಸಿದ್ದಾರೆ .