ಬೆಳ್ತಂಗಡಿ, ಏ 25 (DaijiworldNews/MS): ಜಾಗದ ವಿಚಾರವಾಗಿ ದಲಿತ ಸಮುದಾಯದ ಮಹಿಳೆಯೋರ್ವಳನ್ನು ಅರೆಬೆತ್ತಲೆಗೊಳಿಸಿ ಅದೇ ಸಮುದಾಯದ ತಂಡವೊಂದು ಹಲ್ಲೆಗೈದ ಘಟನೆ ಉಜಿರೆಯ ಗುರಿಪಳ್ಳ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಗಳನ್ನು ಸಂದೀಪ್ (30), ಸಂತೋಷ್ (29), ಗುಲಾಬಿ (55), ಸುಗುಣ (30), ಕುಸುಮಾ (38), ಲೋಕಯ್ಯ (55), ಅನಿಲ್ (35), ಲಲಿತಾ (40) ಮತ್ತು ಚನ್ನಕೇಶವ (40) ಎಂದು ಗುರುತಿಸಲಾಗಿದೆ.
ದೂರು ನೀಡಿದ ಮಹಿಳೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಅವರ ಅಕ್ಕ ವಾಸ್ತವ್ಯ ಇದ್ದ ಸರ್ಕಾರಿ ಭೂಮಿಯನ್ನು ಅಳತೆ ಮಾಡಲು ಕಂದಾಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳ ಕಾರ್ಯಕ್ಕೆ ಆರೋಪಿಗಳು ತಕರಾರು ತೆಗೆದಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಸರ್ವೆ ಮಾಡಲು ಬಂದ ಅಧಿಕಾರಿಗಳು ಕೂಡಾ ಹಿಂತಿರುಗಿದ್ದರು.
ಅಧಿಕಾರಿಗಳು ತೆರಳಿದ ಬಳಿಕ ತನ್ನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಹರಿಬಿಟ್ಟಿದ್ದಾರೆ ಎಂಬ ಬಗ್ಗೆ ಸುರೇಖಾ ದೂರು ನೀಡಿದ್ದಾರೆ.