ಮಂಗಳೂರು, ಡಿ31(SS): ರಾಜ್ಯಾದ್ಯಂತ ಮದ್ಯಪಾನ ನಿಷೇಧಿಸಲು ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನಾ ಜಾಥ ನಗರದಲ್ಲಿ ನಡೆಯಿತು.
ನಗರದ ಪಂಜಿಮೊಗರಿನಿಂದ ಕಾವೂರು ಜಂಕ್ಷನ್ವರೆಗೆ ಎಸ್.ಎಸ್.ಎಫ್ ಸಂಘಟನೆಯ ಮಂಗಳೂರು ವಿಭಾಗದಿಂದ ಜಾಗೃತಿ ಜಾಥ ನಡೆದಿದ್ದು, ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಹಾಫಿಲ್ ಸೂಫಿಯಾನ್ ಸಖಾಫಿ ಮಾತನಾಡಿ, ಮದ್ಯಮುಕ್ತ ಭಾರತವಾಗಬೇಕೆಂಬ ಕನಸು ಗಾಂಧೀಜಿಗಿತ್ತು. ಅವರ ಕನಸನ್ನು ಅನುಯಾಯಿಗಳಾದ ನಾವು ಈಡೇರಿಸಬೇಕು. ನಮ್ಮ ದೇಶ ಮದ್ಯಮುಕ್ತವಾಗಬೇಕು. ಜನರು ಮದ್ಯಪಾನ ಸೇವನೆಯಿಂದ ಹೊರ ಬರಬೇಕು ಎಂದು ಹೇಳಿದರು.
ದೇಶದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಕೊನೆಯಾಗಬೇಕು. ಈ ಅನೈತಿಕ ಚಟುವಟಿಕೆಗಳು ನಿಲ್ಲಬೇಕಾದರೆ ಮದ್ಯ ನಿಷೇಧವಾಗಬೇಕು. ಆಗ ಮಾತ್ರ ದೇಶದಲ್ಲಿ ಅನೈತಿಕ ಚಟುವಟಿಕೆಗಳು ನಿಲ್ಲಲು ಸಾಧ್ಯ. ಈ ವಿಚಾರದಲ್ಲಿ ಸರ್ಕಾರ ಶೀಘ್ರ ಎಚ್ಚೆತ್ತುಕೊಂಡು ಮದ್ಯ ನಿಷೇಧಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಎಸ್.ಎಫ್ ಮಂಗಳೂರು ವಿಭಾಗದ ಅಧ್ಯಕ್ಷ ಜುನೈದ್ ಸಹದಿ, ಎಸ್.ವೈ.ಎಸ್ ಕೋಶಾಧಿಕಾರಿ ಹಕೀಮ ಕೂಳೂರು, ಅಝ್ಮಾಲ್, ಕೆ.ಎಚ್ ಬಾವಾ ಮತ್ತಿತ್ತರು ಉಪಸ್ಥಿತರಿದ್ದರು.