ಬಂಟ್ವಾಳ, ಏ 25 (DaijiworldNews/HR): ತಾಲೂಕಿನ ಬಾಳ್ತಿಲ ಗ್ರಾಮದ ಪುಳಿಂಚ ಫಾರ್ಮ್ ಹೌಸ್ ಚೆಂಡೆ ಶ್ರೀ ಕಾರಣೀಕದ ಕಲ್ಲುರ್ಟಿ ದೈವಸ್ಥಾನದ ಬಯಲು ರಂಗಮಂಟಪದಲ್ಲಿ ಮಂಗಳೂರು ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ದಶಾವತಾರಿ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿಯವರ ಸಂಸ್ಮರಣಾರ್ಥ ಪುಳಿಂಚ ಪ್ರಶಸ್ತಿ ಪ್ರದಾನ-2022 ಸಮಾರಂಭವು ನಡೆಯಿತು.
ಬೋಳ್ನಾಡುಗುತ್ತು ದಿವಂಗತ ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ ಉದ್ಘಾಟಿಸಿದರು.
ಪುಳಿಂಚ ರಾಮಯ್ಯ ಶೆಟ್ಟಿಯವರ ಸಂಸ್ಮರಣಾ ಭಾಷಣಗೈದ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಯವರು ಸ್ನೇಹಶೀಲರಾಗಿ, ಸದಾ ಚಟುವಟಿಕೆಯಿಂದ ಕ್ರೀಯಾಶೀಲರಾಗಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಲೆಯಲ್ಲಿ ಭರವಸೆ ಮೂಡುವ ವಿಚಾರ ಎಂದು ಹೇಳಿದರು.
ಸಮರ್ಥ ಮೇಳ ಹಾಗೂ ಶ್ರೇಷ್ಠ ಕಲಾವಿದರ ಒಡನಾಡದೊಂದಿಗೆ ಪಳಗಿದ್ದ ರಾಮಯ್ಯ ಶೆಟ್ಟರು ಕಲಾವಿದರ ಅಳತೆ, ಸಾಮರ್ಥ್ಯ ನೋಡಿ ಮಾತನಾಡುವ ಕಲೆಯನ್ನು ಹೊಂದಿದ್ದರು. ಜತೆಗೆ ಕಿರಿಯರ ಪ್ರೋತ್ಸಾಹವನ್ನೂ ಮರೆತವರಲ್ಲ. ಹೀಗಾಗಿ ಅವರ ಸ್ಮರಣೆ ಬಹಳ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ ಎಂದರು.
ಮುಖ್ಯಾತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಹಿರಿಯರ ಪರಂಪರೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ದಿ. ಪುಳಿಂಚ ರಾಮಯ್ಯ ಶೆಟ್ಟಿಯವರ ಸ್ಮರಣೆ ಬಹಳ ಮಹತ್ವದ್ದಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಭಾಷೆಯ ಉಳಿವಿನ ನಿಟ್ಟಿನಲ್ಲಿ ಯಕ್ಷಗಾನ ಕೊಡುಗೆ ವಿಶೇಷವಾಗಿದ್ದು, ಭಾಷೆ ಉಳಿದರೆ ಮಾತ್ರ ನಮ್ಮ ಕಲೆ ಉಳಿಯುತ್ತದೆ ಎಂದರು. ಮಂಗಳೂರು ಯಕ್ಷಾಂಗಣ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನಾ ಭಾಷಣ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದರು. ಹಿರಿಯ ಕಲಾವಿದರಾದ ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ ಪುಳಿಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ. ದೇವದಾಸ್ ಕಾಪಿಕಾಡ್, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಜೀವಿತಾ ಹಾಗೂ ಯಕ್ಷಗಾನ ಟೆಂಟಿನ ಹಿರಿಯ ಮೇಸ್ತ್ರೀ ಪೂವಪ್ಪ ಪೂಜಾರಿ ಅವರನ್ನು ಗೌರವಿಸಲಾಯಿತು.
ಕ್ಷೇತ್ರದ ಆಡಳಿತದಾರ, ನ್ಯಾಯವಾದಿ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿದರು. ಪ್ರತಿಷ್ಠಾನದ ಕೊಇಶಾಧಿಕಾರಿ ಪ್ರತಿಭಾ ಶೆಟ್ಟಿ ವಂದಿಸಿದರು. ಹಿರಿಯ ಕಲಾವಿದ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕಯೆಲ್ಲಿ ಚಂದ್ರವಾಳಿ ವಿಲಾಸ ಯಕ್ಷಗಾನ ಪ್ರದರ್ಶನ ,ದೇವದಾಸ ಕಾಫಿಕಾಡ್ ಅವರ ನಿರ್ದೇಶನದ ಕುರೆಪಟ್ ತುಳು ನಾಟಕ ಹಾಗೂ ದೊಂದಿಯ ಬೆಳಕಿನಲ್ಲಿ ಶ್ರೀ ಕಲ್ಲುರ್ಟಿ ದೈವದ ತ್ರೈಮಾಸಿಕ ಕೋಲ ನೆರವೇರಿತು.