ಸುಪ್ರೀತಾ ಸಾಲ್ಯಾನ್
ಸಾವಿರಾರು ವರುಷಗಳ ಇತಿಹಾಸವುಳ್ಳ ಪುರಾತಣ ದೇವಲಾಯವಿದು. ನವದುರ್ಗೆಯರಲ್ಲಿ ಒಂದಾದ ಭಗವತಿ ನೆಲೆಯಾದ ಪುಣ್ಯಕ್ಷೇತ್ರವಿದು. ಅಸಂಖ್ಯಾತ ಭಕ್ತರನ್ನು ಪುನೀತಗೊಳಿಸುವ ಶಾಂತಿಪ್ರಿಯೆ ತಾಯಿ ಭಗವತಿಯ ದರ್ಶನ ಪಡೆಯಬೇಕಾದರೆ ಒಮ್ಮೆ ಮಂಗಳೂರಿನ ಕೊಡಿಯಾಲ ಬೈಲ್ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರಕ್ಕೆ ನೀವು ಭೇಟಿ ನೀಡಲೆಬೇಕು.
ಮಂಗಳೂರು ಮತ್ತು ಕೇರಳದಾದ್ಯಂತ ಇರುವ ಹದಿನೆಂಟು ಭಗವತಿ ಕ್ಷೇತ್ರಗಳಲ್ಲಿ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವು ಅನೇಕ ವಿಚಾರಗಳಲ್ಲಿ ಗಮನೀಯವಾಗಿದೆ. ಕಾರಣ, ತಾಯಿ ಭಗವತಿಗೆ ಪಾಡಾಂಗರೆ ಐವರು, ಚೀರುಂಭ ನಾಲ್ವರು ಮತ್ತು ಪುಲ್ಲೂರಾಳಿ ಐವರು ಭಗವತಿಯರೆಂಬ 14 ದೈವೀ ಶಕ್ತಿಗಳಿವೆ. ಈ ಮೂರು ಭಗವತಿಯ14 ಸ್ವರೂಪವನ್ನು ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಮಾತ್ರ ಕಾಣಲು ಸಾಧ್ಯ. ಶ್ರೀ ಕ್ಷೇತ್ರವು ಭಗವತಿಯ ಸಂಗಮ ಸ್ಥಳವಾಗಿದೆ. ಆದ್ದರಿಂದಲೇ ಈ ಕ್ಷೇತ್ರವನ್ನು ಕೂಟಕ್ಕಳ ಎಂಬುದಾಗಿ ಕರೆಯುತ್ತಾರೆ.
ದೇವರನಾಡು ಎಂದು ಕರೆಯುವ ಕೇರಳದ ದೇವಲಾಯದ ಮಾದರಿಯಂತೆ ಶ್ರೀ ಕ್ಷೇತ್ರವನ್ನು ನಿರ್ಮಿಸಿರುವುದು ಇಲ್ಲಿನ ವಿಶೇಷ. ಕ್ಷೇತ್ರದಲ್ಲಿರುವ ಗರ್ಭಗುಡಿಯ ಕೆತ್ತನೆಯನ್ನು ಕರಾವಳಿಯ ಯಾವ ಕ್ಷೇತ್ರದಲ್ಲೂ ಕಾಣಲು ಸಾಧ್ಯವಿಲ್ಲ. ಭಗವತಿ ಕ್ಷೇತ್ರದ ಮೂಲ ಸ್ಥಾನವಿರುವುದು ಕೇರಳದಲ್ಲಿಯೇ.
ಚರಿತ್ರೆಯ ಪುಟಗಳಲ್ಲಿ ಹೇಳಿರುವಂತೆ, ಶ್ರೀ ಕ್ಷೇತ್ರವು ಹಿಂದೆ ಕಡಲ ಕಿನಾರೆಯಲ್ಲಿತ್ತು. ಮುಂದೆ ದೇವಿಯ ಇಚ್ಛೆಯಂತೆ ಈಗಿರುವ ಕೊಡಿಯಾಲ ಬೈಲಿಗೆ ಕ್ಷೇತ್ರವನ್ನು ಸ್ಥಳಾಂತರಿಸಲಾಯ್ತು. ಕೊಡಿಯಾಲ ಬೈಲ್ನ ಪ್ರದೇಶ ಹಿಂದೆ ಕೋಟೆಶ್ವರ ವಂಶದ ಬ್ರಾಹ್ಮಣರಿಗೆ ಸೇರಿದ ಜಾಗವಾಗಿತ್ತು. ಈ ಮನೆತನದ ಮಂಜಣ್ಣಯ್ಯ ಎಂಬುವವರಿಗೆ ಪುತ್ರ ಸಂತತಿ ಇರಲಿಲ್ಲ. ತಾಯಿ ಭಗವತಿ ಇವರ ಸ್ವಪ್ನದಲ್ಲಿ ಬಂದು, ದೇವಲಾಯ ನಿರ್ಮಾಣಕ್ಕೆ ಸ್ಥಳಾವಕಾಶ ಕೊಟ್ಟರೆ ಪುತ್ರ ಸಂತತಿಯನ್ನು ಕರುಣಿಸುತ್ತೇನೆ ಎಂಬುದಾಗಿ ನುಡಿಯುತ್ತಾಳೆ. ಇದರಂತೆ ಮಂಜಣ್ಣಯ್ಯ ಭೂಮಿಯನ್ನು ದೇವಿಗೆ ದಾನವಿತ್ತಾಗ ಇವರ ವಂಶಾಭಿವೃದ್ಧಿಯಾಗುತ್ತದೆ. ಇದಕ್ಕೆ ನಿದರ್ಶನ ಎನ್ನುವಂತೆ ಈಗಲೂ ಈ ಬ್ರಾಹ್ಮಣ ವಂಶಸ್ಥರು ಕೊಡಿಯಾಲ್ ಬೈಲಿನಲ್ಲಿದ್ದು ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.
ಶ್ರೀ ಕ್ಷೇತ್ರದ ಬಲ ಭಾಗದಲ್ಲಿ ಪುರಾತಣ ಇತಿಹಾಸವುಳ್ಳ ಶಿಲಾಸ್ತಂಭವೊಂದಿದೆ. ಕೇರಳದ ಬೆಳ್ಳಪ್ಪ ನಾಡು ಎಂಬ ಪ್ರದೇಶದ ರಾಜ ವಂಶಸ್ಥರ ಇಡೀ ಚರಿತ್ರೆಯನ್ನು ಶಿಲಾಸ್ತಂಭದಲ್ಲಿ ಕೆತ್ತಲಾಗಿದ್ದು ದೈವೀ ಶಕ್ತಿಯನ್ನು ಹೊಂದಿದೆ. ಹಿಂದೆ ಸಮುದ್ರದಲ್ಲಿ ಈ ಶಿಲಾಸ್ತಂಭ ತೇಲಿ ಬಂದಿತ್ತು ಎಂಬುದು ಜನರ ನಂಬಿಕೆ. ಶಿಲಾಸ್ತಂಭದ ಜೊತೆಯಲ್ಲಿ ಧ್ವಜಸ್ತಂಭವು ತೇಲಿ ಬಂದಿದ್ದು, ಮೀನು ಹಿಡಿಯುವ ಬೆಸ್ತರಿಗೆ ಇದು ಕಾಣ ಸಿಗುತ್ತದೆ. ಬೆಸ್ತರು ಇದರ ಶಕ್ತಿಯನ್ನು ಅರಿತು ಮಂಗಳೂರಿನಲ್ಲಿರುವ ಎಲ್ಲಾ ದೇವಸ್ಥಾನಗಳಿಗೂ ವಿಷಯ ಮುಟ್ಟಿಸುತ್ತಾರೆ. ಆದರೆ ಸಮುದ್ರದಲ್ಲಿ ತೇಲಿ ಬಂದ ಧ್ವಜಸ್ತಂಭವನ್ನು ಕದ್ರಿ ಶ್ರೀ ಮಂಜುನಾಥ ದೇವಾಲಯದವರಿಗೂ, ಶಿಲಾಸ್ತಂಭವನ್ನು ಶ್ರೀ ಭಗವತಿ ಕ್ಷೇತ್ರದವರಿಗೆ ಮಾತ್ರ ಮುಟ್ಟಲು ಸಾಧ್ಯವಾಗುತ್ತದೆ. ಈಗಲೂ ಶಿಲಾ ಮತ್ತು ಧ್ವಜ ಸ್ತಂಭಗಳನ್ನು ಎರಡೂ ಕ್ಷೇತ್ರಗಳಲ್ಲಿ ಕಾಣಬಹುದು.
ಇನ್ನೂ ಶ್ರೀ ಕ್ಷೇತ್ರಕ್ಕೆ ಕ್ರಿ ಶ 1908-09ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಭೇಟಿ ನೀಡಿದ್ದು, ಅವರ ನೆನಪಿಗಾಗಿ ಗುರುಗಳ ಬಿಂಬವನ್ನು ಕ್ಷೇತ್ರದ ಎಡ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಸಾಮನ್ಯವಾಗಿ ಎಲ್ಲಾ ದೇವಲಾಯಗಳಲ್ಲಿ ಬ್ರಾಹ್ಮಣರಿಂದ ಪೂಜೆ ನಡೆಯುವುದು ಪದ್ಧತಿ. ಆದರೆ ಶ್ರೀ ಕ್ಷೇತ್ರದಲ್ಲಿ ಸಾಮನ್ಯ ಜನರೇ ವೃತದಿಂದ ಇದ್ದು ತಾಯಿ ಭಗವತಿಯ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಮಾತ್ರವಲ್ಲದೇ ಶಾಂತಿಪ್ರಿಯೆ ಭಗವತಿಯ ಪೂಜೆಯ ನಂತರ ಭಕ್ತಾದಿಗಳಿಗೆ ಪ್ರಸಾದ ನೀಡುವ ಕ್ರಮ ಭಕ್ತರ ಮನಸ್ಸನ್ನು ಮತ್ತಷ್ಟು ಕ್ಷೇತ್ರದತ್ತ ಸೆಳೆಯುತ್ತದೆ.
ಭಗವತಿಯ ಶಕ್ತಿ ಜೊತೆಗೆ ಈಶ್ವರನ ಶಕ್ತಿಯು ಕ್ಷೇತ್ರದಲ್ಲಿದ್ದು ಅನೇಕ ದೈವ ಸಂಕೀರ್ಣಗಳು ಇಲ್ಲಿ ನೆಲೆಸಿದೆ. ಪ್ರತೀ ದಿನ ತ್ರಿಕಾಲ ಪೂಜೆಯ ಜೊತೆಗೆ ಸಂಕ್ರಾಂತಿ ಪೂಜೆ, ನವರಾತ್ರಿ ಪೂಜೆ, ಪ್ರತೀ ವರ್ಷ ನಡಾವಳಿ ಉತ್ಸವ, 5 ವರ್ಷಗಳಿಗೊಮ್ಮೆ ಭರಣಿ ಮಹೋತ್ಸವ ಮತ್ತು ಹಲವಾರು ವರ್ಷಗಳಿಗೊಮ್ಮೆ ಕಳಿಯಾಟ ಉತ್ಸವ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.
ಸಂತಾನ ಭಾಗ್ಯವನ್ನು ಕರುಣಿಸುವ ವಿಶೇಷ ಶಕ್ತಿ ತಾಯಿಗಿದ್ದು, ವಿದ್ಯೆಗೆ ಸರಸ್ವತಿಯಾಗಿ, ಧನ ಸಂಪಾದನೆಗೆ ಲಕ್ಷ್ಮೀಯಾಗಿ ಭಕ್ತರನ್ನು ಪೊರೆಯುತ್ತಾಳೆ. ಮಂಗಳೂರಿನಿಂದ ಕಲಾ ಕುಂಜ ರಸ್ತೆಯಲ್ಲಿ 2 ಕಿಮೀ ಸಾಗಿದರೆ ಕುದ್ರೋಳಿ ಕೂಟಕ್ಕಳ ಕ್ಷೇತ್ರವನ್ನು ಕಣ್ತುಂಬಿಕೊಳ್ಳಬಹುದು.