ಪುತ್ತೂರು, ಏ 24 (DaijiworldNews/DB): ಡಿ.ಕೆ. ಶಿವಕುಮಾರ್ ನಿಂದನೆ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯವು ಬೆಳ್ಳಾರೆಯ ಸಾಯಿ ಗಿರಿಧರ ರೈ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆ ತೀರ್ಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಸಾರ್ವಜನಿಕ ಸೇವೆಯಲ್ಲಿರುವವರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸುವುದು ಅಪರಾಧವಲ್ಲ ಎಂಬುದಾಗಿ ಕಕ್ಷಿದಾರರ ಪರ ವಕೀಲರಾದ ಬಿ. ನರಸಿಂಹ ಪ್ರಸಾದ್ ವಾದ ಮಂಡಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟ್ ಜೈಲು ಶಿಕ್ಷೆ ತೀರ್ಪಿಗೆ ತಡೆ ನೀಡಿದೆ.
4 ಪ್ರಕರಣಗಳಲ್ಲಿ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ಏಪ್ರಿಲ್ 18ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗಿರಿಧರ ರೈ ಅವರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ 2016ರಲ್ಲಿ ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಗಿರಿಧರ್ ರೈ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿ ನಿಂದನೆ, ಜೀವ ಬೆದರಿಕೆ, ಮಾನಹಾನಿ, ಕರ್ತವ್ಯಕ್ಕೆ ಅಡ್ಡಿ ಎಂಬ ನಾಲ್ಕು ಪ್ರಕರಣಗಳಡಿ ಸಚಿವರ ಪರ ಮೆಸ್ಕಾಂ ಅಧಿಕಾರಿಗಳು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ರೈ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು.