ಮಂಗಳೂರು, ಏ 24 (DaijiworldNews/DB): ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿದ್ದಲ್ಲದೆ ಕರೆ ಮಾಡಿ ಮಾತನಾಡಿದ ಬಸ್ ನಿರ್ವಾಹಕನೋರ್ವನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಭಾರೀ ವೈರಲ್ ಆಗಿದೆ.
ಸ್ಟೇಟ್ಬ್ಯಾಂಕ್ನಿಂದ ಬೋಂದೆಲ್ಗೆ ಸಂಚರಿಸುವ ರೂಟ್ ನಂಬರ್ 19 ಬಸ್ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದ ಮಂಜುನಾಥ್ (21) ಎಂಬಾತನೇ ಒದೆ ತಿಂದ ನಿರ್ವಾಹಕ.
ಮಂಗಳೂರಿನಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಬಸ್ನಲ್ಲಿ ಸಂಚರಿಸುತ್ತಿದ್ದಾಗ ಮಾತನಾಡಿಸಿದ ಬಸ್ ನಿರ್ವಾಹಕ ಬಳಿಕ ಮೊಬೈಲ್ ನಂಬರ್ನ್ನು ಆಕೆಗೆ ನೀಡಿದ್ದಾನೆ. ಅಲ್ಲದೆ, ಬಾಲಕಿಯ ಮನೆಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡಿ ಮನೆಯಲ್ಲಿ ಯಾರ್ಯಾರಿದ್ದಾರೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಬಾಲಕಿಯ ತಾಯಿ ನಿರ್ವಾಹಕನನ್ನು ಭೇಟಿಯಾಗಿ ಆತನಿಗೆ ಹಿಗ್ಗಾಮಗ್ಗ ಥಳಿಸಿದ್ದಾಳೆ. ಬಾಲಕಿ ಒಂದೇ ಬಾರಿ ಈ ಬಸ್ನಲ್ಲಿ ಸಂಚರಿಸಿದ್ದು, ಆಗಲೇ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದೆ.
ಬಸ್ ನಿರ್ವಾಹಕ ಈ ಮೊದಲು ಕೂಡಾ ಅದೇ ರೀತಿಯ ದುರ್ವರ್ತನೆ ತೋರಿದ್ದ ಎಂಬುದಾಗಿ ವೀಡಿಯೋದಲ್ಲಿ ಸೆರೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.