ಮಂಗಳೂರು,ಏ 23 (DaijiworldNews/HR): ಕೊರೊನಾದಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಪತ್ರಕರ್ತರು ತಮ್ಮ ವೃತ್ತಿಯನ್ನು ಸ್ಥಗಿತಗೊಳಿಸದೆ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಹಾಗೂ ಗೌರವದ ಕ್ಷಣ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಶನಿವಾರ ತಾನು ಬರೆದ 'ಕೋವಿಡ್ ಕತೆಗಳು' ಪುಸ್ತಕ ಕುರಿತು ಮಾತನಾಡಿದ ಅವರು, ಜಗತ್ತಿನಲ್ಲಿ ನಡೆದ ಮಹಾಯುದ್ಧದಂತೆ ಕೋವಿಡ್ ಕೂಡ ಮಹಾಮಾರಿಯಾಗಿ ಕಾಡಿದೆ. ಆಗ ಸರ್ಕಾರಗಳು ಕೂಡ ಮನೆಯಲ್ಲೇ ಸುರಕ್ಷಿತವಾಗಿ ಇರುವಂತೆ ಸೂಚನೆಯನ್ನು ನೀಡಿತ್ತು. ಆದರೂ ಪತ್ರಕರ್ತರು ಆರೋಗ್ಯದ ಅಪಾಯವನ್ನೂ ಲೆಕ್ಕಿಸದೆ ಕ್ಷೇತ್ರಕ್ಕೆ ತೆರಳಿ ಕೆಲಸ ಮಾಡಿದ್ದಾರೆ. ಆತಂಕದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಕೋವಿಡ್ ವೇಳೆ ಅನೇಕ ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಕೋವಿಡ್ನಿಂದ ಮೃತಪಟ್ಟ ಸುಮಾರು 55 ಪತ್ರಕರ್ತರಿಗೆ ತಲಾ 5 ಲಕ್ಷ ರೂನಂತೆ ಸರ್ಕಾರದಿಂದ ಪರಿಹಾರ ಮೊತ್ತ ತೆಗೆಸಿಕೊಡುವಲ್ಲಿ ಸಂಘ ಯಶಸ್ವಿಯಾಗಿದೆ. ಅಂದಿನ ಸಿಎಂ ಯಡಿಯೂರಪ್ಪ ಅವರ ಕಾಳಜಿ ಅಭಿನಂದನೀಯ ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಪುಸ್ತಕ ಲೋಕಾರ್ಪಣೆಗೊಳಿಸಿ, ಪತ್ರಕರ್ತರ ನೋವುಗಳಿಗೆ ಅಧ್ಯಕ್ಷರಾಗಿ ಶಿವಾನಂದ ತಗಡೂರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಸುದ್ದಿಯ ಜತೆಗೆ ಮಾನವೀಯತೆಯ ಇನ್ನೊಂದು ಮುಖವನ್ನು ಪುಸ್ತಕದಲ್ಲಿ ಅನಾವರಣಗೊಳಿಸಲಾಗಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಮಾಜದ ಕಲುಷಿತವನ್ನು ನಿವಾರಿಸಲು ನ್ಯಾಯಾಂಗ ಮತ್ತು ಮಾಧ್ಯಮ ರಂಗ ಹೆಚ್ಚಿನ ಗಮನ ನೀಡಬೇಕು ಎಂದಿದ್ದಾರೆ.
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ಸುದ್ದಿಗಾರರಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿರಬೇಕು ಎಂದರು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಮಾಧ್ಯಮ ಅಕಾಡೆಮಿ ಸದಸ್ಯ, ರಾಜ್ಯ ಕಾರ್ಯಕರಿಣಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರರಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರ್ವಹಿಸಿದರು.