ಉಡುಪಿ, ಏ 23 (DaijiworldNews/HR): ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ಸಂಧರ್ಭದಲ್ಲಿ ಸುರಂಗವೊಂದು ಪತ್ತೆಯಾಗಿ ಸ್ಥಳೀಯರಲ್ಲಿ ಕೂತುಹಲ ಮೂಡಿಸಿದೆ. ಮಣಿಪಾಲ - ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸುವ ಸಂಧರ್ಭದಲ್ಲಿ ಇಲ್ಲಿನ ಕೆಳ ಪರ್ಕಳ ಎಂಬಲ್ಲಿ ಈ ಬೃಹತ್ ಸುರಂಗ ಮಾದರಿ ಪತ್ತೆಯಾಗಿದೆ.
ಇಲ್ಲಿನ ಗದ್ದೆಯ ಭಾಗದಲ್ಲಿ ಕಾಮಗಾರಿ ನಡೆಸುವ ವೇಳೆ ಬೃಹತ್ ಸುರಂಗ ಮಾದರಿ ಪತ್ತೆಯಾದದ್ದು ಸ್ಥಳೀಯರ ಕೂತೂಹಲಕ್ಕೆ ಕಾರಣವಾಯಿತು. ಓರ್ವ ಮನುಷ್ಯ ಆರಾಮವಾಗಿ ಒಳಗೆ ಹೊರಗೆ ಸಂಚರಿಸುವಷ್ಟು ಅಗಲವಾದ ಸುರಂಗ ಇದಾಗಿದ್ದು ಹಲವಾರು ಮಂದಿ ಸ್ಥಳೀಯರು ಬಂದು ವೀಕ್ಷಿಸಿ ಹೋದರು.
ಈ ಭಾಗದಲ್ಲಿ ಗುಡ್ಡ, ಸಮತಟ್ಟು ಮಾಡಿ ರಸ್ತೆ ನಿರ್ಮಿಸಬೇಕಾಗಿರುವುದರಿಂದ ತುಂಬಾ ಕಷ್ಟದ ಕೆಲಸ ಇದಾಗಿದೆ. ಉಡುಪಿಯಿಂದ ಮಣಿಪಾಲದ ವರೆಗೂ ನಾವು ಕಾಮಗಾರಿಯನ್ನು ನಿರ್ವಹಿಸಿದ್ದೇವೆ ಆದರೆ ಪ್ರಥಮ ಬಾರಿಗೆ ಇಂತಹ ರಚನೆ ನಮಗೆ ಸಿಕ್ಕಿದೆ ಎಂದು ಗುತ್ತಿಗೆದಾರ ಸಂಸ್ಥೆಯ ಇಂಜಿನಿಯರ್ ಆದ ಜೋಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಭಾಗದ ಗದ್ದೆಗಳಿಗೆ "ಪೆರ್ಮರಿ ಗದ್ದೆ" ಎಂಬ ಹೆಸರು ಕೂಡಾ ಇದ್ದು ಇಂತಹ ಇನ್ನೂ ಅನೇಕ ರಚನೆಗಳು ಇರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಇತಿಹಾಸ ಮತ್ತು ಪ್ರಾಚ್ಯ ಸಂಶೋಧಕರಾದ ಟಿ. ಮುರುಗೇಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.