ಮಂಗಳೂರು, ಏ 23 (DaijiworldNews/DB): ಇಳಿ ವಯಸ್ಸಿನ ವೃದ್ದೆಯೋರ್ವರು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂ.ಗಳನ್ನು ದೇವಳದ ಅನ್ನದಾನಕ್ಕೆ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಇದುವರೆಗೆ ಇವರು ಅನ್ನದಾನಕ್ಕೆ ನೀಡಿದ ಒಟ್ಟು ಮೊತ್ತ ಆರು ಲಕ್ಷಕ್ಕೂ ಮಿಕ್ಕಿ!
ನಾನು, ನನ್ನದು ಎಂಬ ಸ್ವಾರ್ಥ ಜೀವನ ನಡೆಸುವ ಜನರ ನಡುವೆ 80ರ ಈ ವೃದ್ದೆ ವಿಭಿನ್ನವಾಗಿ ತೋರುತ್ತಾರೆ. ಮೂಲದ ಕುಂದಾಪುರದ ಗಂಗೊಳ್ಳಿ ಸಮೀಪದದ ಕಂಚಿಗೋಡಿನವರಾದ ಅಶ್ವತ್ಥಮ ಅನ್ನದಾನವೇ ದೇವರ ಸೇವೆ ಎಂದು ನಂಬಿದ್ದಾರೆ. ಅದಕ್ಕಾಗಿ ದುಡಿದ್ದನ್ನೆಲ್ಲ ತನಗಾಗಿ ಕೂಡಿಟ್ಟುಕೊಳ್ಳದೆ ದೇವಸ್ಥಾನಗಳ ಅನ್ನದಾನಕ್ಕಾಗಿ ನೀಡಿದ್ದಾರೆ. ಅಂತೆಯೇ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಸಂದರ್ಭ ಅನ್ನದಾನಕ್ಕೆಂದು ಭಿಕ್ಷೆ ಬೇಡಿ ಒಟ್ಟುಗೂಡಿಸಿದ ಒಂದು ಲಕ್ಷ ರೂ.ಗಳನ್ನು ಹಸ್ತಾಂತರಿಸಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಕಳೆದ ಹಲವು ವರ್ಷಗಳಿಂದ ಇವರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.
ಅಶ್ವತ್ಥಮ್ಮರ ಪತಿ 18 ವರ್ಷಗಳ ಹಿಂದೆ ಮೃತಪಟ್ಟಿದ್ದು ಬಳಿಕ ಇಬ್ಬರು ಮಕ್ಕಳೂ ಸಾವನ್ನಪ್ಪಿದ್ದಾರೆ. ಆ ಬಳಿಕ ಭಿಕ್ಷಾಟನೆಯನ್ನೇ ವೃತ್ತಿಯಾಗಿಸಿಕೊಂಡ ವೃದ್ದೆ ಈವರೆಗೆ ಸಂಗ್ರಹಿಸಿದ ಆರು ಲಕ್ಷ ರೂ.ಗಳಿಗೂ ಮಿಕ್ಕಿ ಹಣವನ್ನು ವಿವಿಧ ದೇವಳಗಳ ಅನ್ನದಾನಕ್ಕೆ ಅರ್ಪಿಸಿ ದೇವರ ಸೇವೆ ಮಾಡಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳಿಗೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ, ಗಂಗೊಳ್ಳಿ ದೇವಸ್ಥಾನದಲ್ಲಿ ಅನ್ನದಾನ ಸೇವೆ ಮಾಡಿದ್ದಾರೆ.
ಅಯ್ಯಪ್ಪನ ಭಕ್ತೆಯಾಗಿರುವ ಇವರು ಹಲವು ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿದ್ದು ವರ್ಷದ ಬಹುತೇಕ ಸಮಯವನ್ನು ಮಾಲೆ ಹಾಕುವುದರಲ್ಲಿಯೇ ಕಳೆಯುತ್ತಾರೆ. ಶ್ರದ್ದೆಯಿಂದ ವೃತಾಚರಣೆಯನ್ನೂ ನಡೆಸುತ್ತಾರೆ. ಶಬರಿಮಲೆಯ ಪಂಪೆ, ಪಂದಳ, ಎರಿಮಲೆಯಲ್ಲೂ ಅಶ್ವತ್ಥಮ್ಮ ಅನ್ನದಾನ ನೆರವೇರಿಸಿದ್ದಾರೆ. ದೇವರು ಎಲ್ಲರನ್ನೂ ಚೆನ್ನಾಗಿಟ್ಟಿರಲಿ. ಯಾರೂ ಹಸಿದ ಹೊಟ್ಟೆಯಲ್ಲಿರಬಾರದು ಎಂಬುದೇ ಅಶ್ವತ್ಥಮ್ಮ ಅವರ ಮಾತು.