ಮಂಗಳೂರು, ಏ 23 (DaijiworldNews/HR): ಮಸೀದಿಯ ಜಮೀನಿನಲ್ಲಿ ಪುರಾತನ ಹಿಂದೂ ದೇಗುಲದ ಅವಶೇಷಗಳನ್ನು ಇರಿಸಿರುವ ವಿವಾದದ ಹಿನ್ನೆಲೆಯಲ್ಲಿ ಮಸೀದಿ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಮಸ್ಯೆ ಬಗೆಹರಿಯುವವರೆಗೆ ಮುಂಜಾಗ್ರತಾ ಕ್ರಮವಾಗಿ ಮಸೀದಿ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಸೀದಿಯ ಅಧ್ಯಕ್ಷ ಮಹಮ್ಮದ್ ಮಾಮು ಮಾತನಾಡಿ, ಈ ಮಸೀದಿಗೆ 900 ವರ್ಷಗಳ ಇತಿಹಾಸವಿದೆ. ನವೀಕರಣಕ್ಕಾಗಿ ಮಸೀದಿಯ ಹೊರಭಾಗವನ್ನು ಕೆಡವಲಾಗಿದ್ದು, ಮಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ದೇವಸ್ಥಾನದಂತೆ ಬಿಂಬಿಸಲಾಗಿದ್ದು, ಅದು ಗೊಂದಲ ಸೃಷ್ಟಿಸಿದೆ. ಕಂದಾಯ ಅಧಿಕಾರಿಗಳು ಮಸೀದಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಸೀದಿ ನಿರ್ಮಿಸಲು ಕೆಲವು ಹಳೆಯ ಹಿಂದೂ ದೇವಾಲಯವನ್ನು ಕೆಡವಲಾಗಿದೆ ಎಂಬ ಶಂಕೆ ಇದೆ ಎಂದು ವಿಎಚ್ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಗಂಜಿಮಠದ ನಿವಾಸಿ ಧನಂಜಯ್ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮಸೀದಿ ಒಳಗೆ ಪತ್ತೆಯಾಗಿದ್ದ ಪುರಾತನ ದೇವಾಲಯ ಶೈಲಿಯ ಕಟ್ಟಡವನ್ನು ರಕ್ಷಿಸಲು ಮನವಿ ಮಾಡಿದ್ದು, ಈ ಬಗ್ಗೆ ಮೂರನೇ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ವಿಚಾರಣೆ ನಡೆಸಿ ಮುಂದಿನ ವಿಚಾರಣೆ ದಿನಾಂಕದ ವರೆಗೂ ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸುವುದಕ್ಕೆ ಅಥವಾ ಕಟ್ಟಡಕ್ಕೆ ಹಾನಿ ಉಂಟುಮಾಡದಂತೆ ತಡೆ ನೀಡಿದೆ. ಅಷ್ಟೇ ಅಲ್ಲದೇ ಮಸೀದಿ ಸಮಿತಿಯ ಸದಸ್ಯರು ಅಥವಾ ಭಕ್ತಾದಿಗಳು ಕಟ್ಟಡದ ಒಳಭಾಗಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.
ಇದೇ ವೇಳೆ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ದೇವಸ್ಥಾನದ ಜಾತ್ರೆ ವೇಳೆ ಮುಸ್ಲಿಮರಿಗೆ ವ್ಯಾಪಾರ ವಹಿವಾಟು ನಡೆಸದಂತೆ ಅವ್ಯವಸ್ಥೆ ಸೃಷ್ಟಿಸುತ್ತಿರುವ ಶರಣ್ ಪಂಪ್ವೆಲ್ಗೆ ಮಸೀದಿಯೊಳಗೆ ಏನು ವ್ಯವಹಾರವಿದೆ? ವಾಸ್ತವವಾಗಿ, ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಅಕ್ರಮವಾಗಿ ಮಸೀದಿಗೆ ಪ್ರವೇಶಿಸಿದ ಶರಣ್ ಪಂಪ್ವೆಲ್ ಮತ್ತು ಅವರ ತಂಡವನ್ನು ಬಂಧಿಸಬೇಕಾಗಿತ್ತು ಎಂದು ಹೇಳಿದ್ದಾರೆ.