ಕುಂದಾಪುರ, ಏ 23 (DaijiworldNews/MS): ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯದ ರಕ್ಷಣೆ, ಆರೋಗ್ಯದ ಕಾಳಜಿ ಎಲ್ಲರಲ್ಲಿಯೂ ಇರಬೇಕಾದುದು ಅತ್ಯಗತ್ಯವಾದುದು. ನಾವು ಆರೋಗ್ಯವಾಗಿದ್ದರೆ ನಮ್ಮ ಕುಟುಂಬ ನೆಮ್ಮದಿಯಿಂದ ಇರಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೊನಾ ಅನಂತರದ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಕರೆಯಂತೆ ದೇಶದ ಎಲ್ಲ ತಾಲೂಕಿನಲ್ಲಿಯೂ ಈ ಬೃಹತ್ ಆರೋಗ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶನಿವಾರ ಕುಂದಾಪುರದ ಉಪವಿಭಾಗ ಸರಕಾರಿ ಆಸ್ಪತ್ರೆ ಆವರಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಆಯುಷ್ ವಿಭಾಗ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 75ನೇ ವರ್ಷದ ಸ್ವಾತಂತ್ಯದ ಅಮೃತ ಮಹೋತ್ಸವದ ಅಂಗವಾಗಿ ಕುಂದಾಪುರ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮುಖ್ಯವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಹೆಚ್ಚು. ಏನೇ ಸಣ್ಣ ಮಟ್ಟದ ಅನಾರೋಗ್ಯ ಉಂಟಾದರೂ, ತತ್ಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿ, ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಹಿಂಜರಿಕೆ ಬೇಡ ಎಂದ ಅವರು, ಕೇಂದ್ರ ಸರಕಾರವು ಬಡ ವರ್ಗದ ಜನರಿಗೆ ಅನುಕೂಲವಾಗಲು ಆಯುಷ್ಮಾನ್ ಕಾರ್ಡ್ನಡಿ ೫ ಲಕ್ಷ ರೂ. ಚಿಕಿತ್ಸೆ ವೆಚ್ಚ ನೀಡುತ್ತಿದ್ದು, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಈ ಕಾರ್ಡ್ ಮಾಡಿಸಿ, ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ ಎಂದವರು ಮನವಿ ಮಾಡಿಕೊಂಡರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್. ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್ ಭಟ್, ಸಹಾಯಕ ಆಯುಕ್ತ ಕೆ.ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ಉಡುಪ ಎಚ್., ತಾಲೂಕು ಆರೋಗ್ಯಾಧಿಕಾರಿ ಡಾ| ರಾಜೇಶ್ವರಿ, ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪಾತ್ರರಾದ ಎ-ಎಸ್ಎಸ್ಎಐ ಉಡುಪಿ ಅಂಕಿತ ಅಧಿಕಾರಿ ಡಾ| ಪ್ರೇಮಾನಂದ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ| ನಾಗೇಶ್ ಅವರನ್ನು ಗೌರವಿಸಲಾಯಿತು.
ಆಸ್ಪತ್ರೆಯ ಆಡಳಿತ ಶಶ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಸ್ವಾಗತಿಸಿ, ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.