ಹೆಮ್ಮಾಡಿ, ಏ 23 (DaijiworldNews/MS): ಕಾರ್ಯಕರ್ತರು ಸಕ್ರೀಯರಾಗಿದ್ದಾಗ ಮಾತ್ರ ಪಕ್ಷ ಎಲ್ಲ ಚುನಾವಣೆಗಳಲ್ಲೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಸದಸ್ಯರು, ಪರಾಜಿತರಾದವರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಅವರು ಶನಿವಾರ ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಾನು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ 13 ವಿಧಾನಸಭಾ ಕ್ಷೇತ್ರ, 26 ಬ್ಲಾಕ್ಗಳು, 70-80 ಜಿ.ಪಂ. ಕ್ಷೇತ್ರಗಳು ಬರುತ್ತವೆ. ಪರಿಷತ್ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾ.ಪಂ.ಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು. ಎಲ್ಲೆಲ್ಲ ಅಗತ್ಯವಿದೆ ಅನ್ನುವುದನ್ನು ತಿಳಿಸುವಂತಹ ಕಾರ್ಯ ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ ಎಂದ ಅವರು, ತನ್ನನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಗ್ರಾ.ಪಂ. ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಬೂತ್ ಮಟ್ಟದ ಕಾರ್ಯಕ್ರಮ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಹತ್ತಿರ ಬರುವಾಗ ಬಿಜೆಪಿಯವರು ಭಾವನಾತ್ಮಕ ನೆಲೆಯಲ್ಲಿ ಜನರನ್ನು ಮರುಳು ಮಾಡಲು ಅನೇಕ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಇದರಿಂದ ನಮ್ಮ ಕಾರ್ಯಕರ್ತರು ವಿಚಲಿತರಾಗದೇ, ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬಲವರ್ಧನೆಯಲ್ಲಿ ಕೈಜೋಡಿಸಬೇಕು.ಹಿಂದೆ ೪ ಬಾರಿ ಶಾಸಕನಾಗಿದ್ದು, ಆಗ ಬೈಂದೂರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಆಯಾಯ ಗ್ರಾಮಗಳಲ್ಲಿ ತಿಳಿಸುವ ಪ್ರಯತ್ನವನ್ನು ಸದಸ್ಯರು, ಸ್ಥಳೀಯ ಮುಖಂಡರು ಮಾಡಬೇಕು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಲ್ಲೂರಿನಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಆರಂಭಗೊಳ್ಳಲಿದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಮಾತನಾಡಿದರು.
ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶನಿ ಒಲಿವೆರಾ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪ್ರದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಗುಜ್ಜಾಡಿ, ಹೆಮ್ಮಾಡಿ, ಕಟ್ಬೆಲ್ತೂರು, ಹೊಸಾಡು, ಗಂಗೊಳ್ಳಿ ಹಾಗೂ ತ್ರಾಸಿ ಗ್ರಾ.ಪಂ. ಸದಸ್ಯರು, ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಕ್ಷದ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವಂದಿಸಿದರು.