ಉಡುಪಿ, ಏ 23 (DaijiworldNews/DB): ಹೈಕೋರ್ಟ್ ಆದೇಶವಿದ್ದರೂ ಹಿಜಾಬ್ ಹೋರಾಟಗಾರ್ತಿಯರು ಈ ನೆಲದ ನಿಯಮ ಮೀರಿ ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಕೋರ್ಟ್, ಸರ್ಕಾರ, ಪೊಲೀಸ್ ವ್ಯವಸ್ಥೆಗೆ ಗೌರವ ನೀಡದಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ಸ್ಪಷ್ಟ ನಿರ್ಧಾರ ಕೊಟ್ಟಿದೆ. ರಾಜ್ಯ ಶಿಕ್ಷಣ ಇಲಾಖೆ ಕೂಡ ಸಮವಸ್ತ್ರ ಕಡ್ಡಾಯ ಮಾಡಿ ಆದೇಶಿಸಿದೆ. ಆದಾಗ್ಯೂ ಹೈಕೋರ್ಟ್ ಆದೇಶ ಮೀರಿ ಹಿಜಾಬ್ ಗೆ ಬೆಂಬಲ ನೀಡುತ್ತಿರುವುದು, ಕೋರ್ಟ್ ಗೆ ಸರಕಾರಕ್ಕೆ ಪೊಲೀಸ್ ವ್ಯವಸ್ಥೆಗೆ ಗೌರವ ಕೊಡದಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ ಎಂದರು.
ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದಕ್ಕೆ ಹೊರಟಿದ್ದಾರೆ. ಭಾರತದಲ್ಲಿ ಎಲ್ಲರೂ ಒಂದೇ ರೀತಿ ಬದುಕಬೇಕು ಎಂದು ನಾವು ಬಯಸುತ್ತಿದ್ದೇವೆ. ಭಾರತವನ್ನು ಬಿಟ್ಟು ಹೋದ ಹಿಂದುಗಳ , ಅಲ್ಪಸಂಖ್ಯಾತರ ಪರಿಸ್ಥಿತಿ ಹೇಗಾಗಿದೆ ಎಂದು ಈಗ ನೋಡಬಹುದು.ಊಟಕ್ಕೂ ಗತಿಯಿಲ್ಲದಂತಾಗಿದೆ. ಏಕತೆ ಇಲ್ಲ, ಭಾರತದಲ್ಲಿ ಎಲ್ಲರಿಗೂ ಊಟ ಕೊಟ್ಟು, ವಿದ್ಯೆ ಕೊಟ್ಟು, ಔಷಧಿ ನೀಡಿ ಸಲಹುತ್ತಿದೆ. ಇದು ದೇಶಕ್ಕೆ, ಪ್ರಪಂಚಕ್ಕೆ ನೀಡುತ್ತಿರುವ ಸಂದೇಶವಾಗಿದೆ ಎಂದರು.
ಹೆಣ್ಣು ಮಕ್ಕಳಿಗೆ ಗೌರವ ಸಿಗುವುದರೊಂದಿಗೆ ವಿದ್ಯೆ ಪಡೆದು ಸ್ವತಂತ್ರ್ಯವಾಗಿ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ. ಕೇವಲ ಹಿಜಾಬ್ ವಿಚಾರಕ್ಕೆ ಹಾಲ್ ಟಿಕೆಟ್ ಪಡೆದುಕೊಂಡು ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಾ ಇತರ ದೇಶಗಳಲ್ಲಿಯೂ ಚರ್ಚಿಸುವಂತೆ ಮಾಡುವುದು ಸರಿಯಲ್ಲ. ಭಾರತದಲ್ಲಿ ಏನೋ ಆಗಿದೆ ಎಂಬ ರೀತಿಯಲ್ಲಿ ಬಿಂಬಿಸುವುದು, ಇನ್ಯಾವುದೋ ಭಯೋತ್ಪಾದನೆ ಸಂಘಟನೆ ಬೆಂಬಲ ಮಾಡುವ ರೀತಿಯಲ್ಲಿ ತೋರಿಸುವುದು ನಡೆಯುತ್ತಿದೆ. ಆ ಮಕ್ಕಳು ಪರೀಕ್ಷೆ ಬರೆದು ಪದವಿ ಪಡೆದು ಸ್ವತಂತ್ರವಾಗಿ ತಮ್ಮ ಕಾಲ ಮೇಲೆ ನಿಲ್ಲುವಂತೆ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದವರು ತಿಳಿಸಿದರು.
ಶಿವಮೊಗ್ಗ ಮತ್ತು ಹುಬ್ಬಳ್ಳಿ ಪೋಲಿಸ್ ಠಾಣೆ ಮೇಲೆ ಮತ್ತು ಪೊಲೀಸರ ಮೇಲೆ ದಾಳಿ ಆಗಿದೆ. ಇದು ಅವರ ದರ್ಪ, ದಾರ್ಷ್ಟ್ಯವನ್ನು ತೋರಿಸುತ್ತಿದೆ. ತಮ್ಮ ಜನಸಂಖ್ಯೆ ಹೆಚ್ಚಿದರೆ ಏನೂ ಮಾಡಬಹುದು ಎಂದು ತೋರಿಸುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಗಲಭೆಗೆ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಅವರ ಮೇಲೆ ತನಿಖೆ ಆಗಬೇಕು. ಕಠಿಣ ಶಿಕ್ಷೆ ಆಗಬೇಕು. ಹಿಂದುಗಳು ಅಲ್ಪಸಂಖ್ಯಾತ ಒಂದಾಗಿ ಏಕತೆಯಿಂದ ಬಾಳಬೇಕು ಎನ್ನುವುದು ನಾವು ನೀಡುತ್ತಿರುವ ಸಂದೇಶ ಎಂದು ಸಚಿವ ಶೋಭಾ ಕರಂದ್ಲಾಜೆ ಇದೇ ವೇಳೆ ತಿಳಿಸಿದರು.