ಉಡುಪಿ, ಏ 23 (DaijiworldNews/MS) : "ನಮ್ಮ ದೇಶ ಎಲ್ಲಿಗೆ ಸಾಗುತ್ತಿದೆ?" ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ನಿರಾಕರಿಸಿದ ನಂತರ ಹಿಜಾಬ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಾದ ಪೈಕಿ ಅಲಿಯಾ ಅಸ್ಸಾದಿ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಆಲಿಯಾ ಅಸಾದಿ ಮತ್ತು ರೇಷಮ್ ಪ್ರವೇಶ ಪತ್ರ ಪಡೆದು ಬಳಿಕ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಬೇಕೆಂಬ ಹಠ ಹಿಡಿದು ಪರೀಕ್ಷೆ ಬರೆಯದೆ ಮನೆಗಳಿಗೆ ಹಿಂದಿರುಗಿದ್ದರು . ಪರೀಕ್ಷೆಗೆ ಗೈರಾಗಿದ್ದ ಆಲಿಯಾ ಅಸಾದಿ ಈ ಕುರಿತು ಟ್ವೀಟ್ ಮಾಡಿದ್ದು ತಮ್ಮ
ಆಕ್ರೋಶ ಮತ್ತು ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಏಪ್ರಿಲ್ 22 ರಂದು ತಡರಾತ್ರಿ ಅಲಿಯಾ ಅಸ್ಸಾದಿ ಮಾಡಿದ ಟ್ವೀಟ್ನಲ್ಲಿ,'ನನಗೆ ಮತ್ತು ರೇಷಮ್ ಗೆ ಪರೀಕ್ಷೆ ಬರೆಯಲು ಪರೀಕ್ಷಾ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಇದರಿಂದ ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ. ಬಿಜೆಪಿ ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ. ನಮ್ಮ ದೇಶ ಎತ್ತ
ಸಾಗುತ್ತಿದೆ' ಎಂದು ಆಲಿಯಾ ಅಸಾದಿ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.