ಮಂಗಳೂರು, ಏ 23 (DaijiworldNews/DB): ವ್ಯಕ್ತಿಯೋರ್ವರು ಲಕ್ಷಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿರುವ ಫ್ರಾನ್ಸ್ ಮೂಲದ ವ್ಯಕ್ತಿ ಪೊಲೀಸರ ಮೊರೆ ಹೋಗಿ ಹಣವನ್ನು ಮರಳಿ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಮಂಗಳೂರು ಪೊಲೀಸರಿಗೆ ಆತ ಧನ್ಯವಾದ ಅರ್ಪಿಸಿದ್ದಾನೆ.
ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಫ್ರಾನ್ಸ್ನ ವಿಲ್ಲೆ ನಗರದ ಯೋ ಫಿಲ್ ಚಿಲಿಂಬಿಯ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ. ಪರಿಚಿತ ವ್ಯಕ್ತಿಯೋರ್ವ ಈತನಿಂದ 7.76 ಲಕ್ಷ ರೂ. ಹಣವನ್ನು ಹೊಟೇಲ್ ಆರಂಭಿಸಲೆಂದು ಪಡೆದಿದ್ದು, ಮರಳಿ ನೀಡಿರಲಿಲ್ಲ. ದಿನಗಳೆದಂತೆ ಆತ ಮೊಬೈಲ್ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಯೋ ಫಿಲ್ ಮಂಗಳೂರಿನ ಸೈಕ್ಲಿಸ್ಟ್ಗಳಲ್ಲಿ ವಿಷಯ ತಿಳಿಸಿದ್ದನು. ಸ್ವತಃ ಸೈಕ್ಲಿಸ್ಟ್ ಆಗಿರುವುದರಿಂದ ಸೈಕ್ಲಿಸ್ಟ್ಗಳೊಂದಿಗೆ ಗೆಳೆತನವಿದ್ದ ಕಾರಣ ಸೈಕ್ಲಿಸ್ಟ್ ಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಹೇಳಿದ್ದಾರೆ.ಅವರ ಸಲಹೆಯಂತೆ ಈತ ವಂಚನೆ ಪ್ರರಕಣ ದಾಖಲಿಸಿದ್ದ.
ಪ್ರಕರಣ ಸಂಬಂಧಿಸಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ವಂಚಕನ ತಂದೆಯು ಮಗ ಫ್ರಾನ್ಸ್ ವ್ಯಕ್ತಿಯಿಂದ ಪಡೆದುಕೊಂಡ ಸಂಪೂರ್ಣ ಹಣವನ್ನು ಹಿಂತಿರುಗಿಸಿದ್ದಾರೆ. ಬಳಿಕ ವಿಚಾರಣೆಗೆ ಕರೆದಾಗ ಠಾಣೆಗೆ ಹಾಜರಾಗಬೇಕು ಎಂದು ತಿಳಿಸಿ ನೊಟೀಸ್ ನೀಡಿ ಆರೋಪಿಯನ್ನು ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ವಂಚನೆಯಿಂದಾಗಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಹಕರಿಸಿದ ಮಂಗಳೂರು ಪೊಲೀಸರಿಗೆ ಯೋ ಫಿಲ್ ಧನ್ಯವಾದ ಅರ್ಪಿಸಿದ್ದಾನೆ.