ಮಂಗಳೂರು, ಏ 23 (DaijiworldNews/MS): ಅತಿವೇಗದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಜಕದ ಮೇಲೆ ಹಾರಿ, ರಸ್ತೆಯ ಇನ್ನೊಂದು ಭಾಗದಲ್ಲಿನ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರೀತಿ ಮನೋಜ್ ಅವರ ಮೆದುಳು ನಿಷ್ಕ್ರೀಯಗೊಂಡಿದ್ದು, ಈ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರು ಅಂಗಾಗ ದಾನ ಮಾಡವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಪ್ರೀತಿ ಮನೋಜ್
ಏ.9 ರ ಶನಿವಾರದಂದು ಮಧ್ಯಾಹ್ನ 1.20ರ ಸುಮಾರಿಗೆ ಬಲ್ಲಾಳ್ ಭಾಗ್ ಜಂಕ್ಷನ್ನಲ್ಲಿ ಈ ಅಪಘಾತ ಸಂಭವಿಸಿತ್ತು. ಬಿಎಂಡಬ್ಲ್ಯೂ ಕಾರು ಚಾಲಕನ ವೇಗದ ಚಾಲನೆಗೆ ಕಾರು ಡಿವೈಡರ್ ಮೇಲಿಂದ ಹಾರಿ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ. ಅತಿವೇಗದ ಚಾಲನೆಯಿಂದ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಕಾರಿಗೆ ಡಿಕ್ಕಿ ಹೊಡೆದಿತ್ತು.ಅಪಘಾತದದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ 47ರ ಹರೆಯ ಪ್ರೀತಿ ಮನೋಜ್ ಎಂಬುವವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಮೆದುಳು ನಿಷ್ಕ್ರೀಯಗೊಂಡ ಹಿನ್ನಲೆಯಲ್ಲಿ ಪ್ರೀತಿ ಅವರ ಅಂಗಾಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಈ ಭೀಕರ ಅಪಘಾತ ಘಟನೆಯಲ್ಲಿ ಪಾದಾಚಾರಿ ಮಹಿಳೆ ಮತ್ತು ಮತ್ತೊಂದು ಕಾರಿನಲ್ಲಿದ್ದ ಏಳು ವರ್ಷದ ಮಗುವಿಗೂ ಕೂಡ ಗಾಯವಾಗಿತ್ತು. ಕಾರು ಚಾಲಕನನ್ನು ಮನ್ನಗುಡ್ಡದ ಉದ್ಯಮಿ ಶ್ರವಣ್ ಕುಮಾರ್ ಪೊಲೀಸರು ವಶಕ್ಕೆ ಪಡೆದಿದ್ದರು.