ಮಂಗಳೂರು, ಏ 22 (DaijiworldNews/MS): ನಾಗರಿಕರ ಹಿತದೃಷ್ಟಿಯಿಂದ ತೆರಿಗೆ ಪಾವತಿಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಎ.25ರಿಂದ ನಗರದ ಅಂಚೆ ಕಚೇರಿ ಮತ್ತು ಮಂಗಳೂರು ಒನ್ ಸೇವಾ ಕೇಂದ್ರದಲ್ಲಿಯೂ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು ಇದನ್ನು ಸದುಪಯೋಗಪಡಿಸುವಂತೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಮನಪಾ ವ್ಯಾಪ್ತಿಯಲ್ಲಿ ಸ್ವಯಂ ನಿರ್ಧರಣೆ ಪದ್ಧತಿ ಮೂಲಕ ಪಾವತಿಸಲಾಗುತ್ತಿರುವ ಆಸ್ತಿ ತೆರಿಗೆಯನ್ನು 2021ರ ನವೆಂಬರ್ ತಿಂಗಳಿನಿಂದ ಸಂಪೂರ್ಣ ಆನ್ಲೈನ್ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಡಿ ನಾಗರಿಕರು ತಮ್ಮ ಆಸ್ತಿಗಳ ತೆರಿಗೆಯನ್ನು ನೆಟ್ ಬ್ಯಾಂಕಿಂಗ್, ಯುಪಿಐ, ಡೆಬಿಟ್/ ಕ್ರೆಡಿಟ್ ಕಾರ್ಡ್ ಮತ್ತು ಇತರ ಡಿಜಿಟಲ್ ವಹಿವಾಟಿನ ಮೂಲಕ ಪಾವತಿಸಬಹುದು. ಅಲ್ಲದೆ ಆಫ್ಲೈನ್ ಮೂಲಕ ಚಲನುಗಳನ್ನು ಡೌನ್ಲೋಡ್ ಮಾಡಿ ಪಾಲಿಕೆ ವ್ಯಾಪ್ತಿಯೊಳಗಿನ ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ನ ಯಾವುದೇ ಶಾಖೆಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.