ಉಡುಪಿ, ಏ 22 (DaijiworldNews/DB): ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಅಂದ ಮೇಲೆ ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷಾ ಕೇಂದ್ರಕ್ಕೆ ಯಾಕೆ ಬರಬೇಕಿತ್ತು ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಪ್ರಶ್ನಿಸಿದ್ದಾರೆ.
ಹಿಜಾಬ್ಗಾಗಿ ಪಟ್ಟು ಹಿಡಿದು ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಇಬ್ಬರು ವಿದ್ಯಾರ್ಥಿನಿಯರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬೇರೆ ವಿದ್ಯಾರ್ಥಿಗಳು ಕೂಡ ಇವರಂತೆ ಶಿಕ್ಷಣದಿಂದ ವಂಚಿತರಾಗಬೇಕು ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದರು. ಅಧಿಕಾರಿಗಳು ಸರಕಾರದ ಸುತ್ತೊಲೆಯನ್ನು ಪಾಲಿಸಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದರು.
ಈ ಹಿಂದಿನಿಂದಲೂ ಭಯೋತ್ಪಾದಕ ಸಂಘಟನೆಗಳ ಸದಸ್ಯರಂತೆ ವರ್ತಿಸುತ್ತಿದ್ದರು. ಅವರು ಈ ಮಟ್ಟಿಗೆ ಬೆಳೆಯಬೇಕಾದರೆ ಮತಾಂಧ ಶಕ್ತಿಗಳ ಕೈವಾಡವಿದೆ. ಇವತ್ತು ಪರೀಕ್ಷಾ ಕೇಂದ್ರದಲ್ಲಿ ಬಡ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಶಿಕ್ಷಣ ವ್ಯವಸ್ಥೆಯನ್ನು ಧ್ವಂಸ ಮಾಡುವ ಉದ್ದೇಶವನ್ನು ವಿದ್ಯಾರ್ಥಿನಿಯರು ಹೊಂದಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕಾಲೇಜು ಮಾತ್ರವಲ್ಲ, ಸಾರ್ವಜನಿಕ ಪ್ರದೇಶದಲ್ಲಯೂ ಹಿಜಾಬ್ ನಿಷೇಧವಾಗುವ ಸಂಭವವಿದೆ. ಯುರೋಪ್ ದೇಶಗಳಲ್ಲಿ ಕೂಡಾ ಈ ಕುರಿತು ಈಗಾಗಲೇ ವಿವಾದ ಶುರುವಾಗಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ಹೊಂದಿರುವ ನಾವು ಫ್ರಾನ್ಸ್ ಗಿಂತ ಮೊದಲು ಈ ಕಾರ್ಯಕ್ರಮ ಮಾಡಿದಾಗ ವಿಶ್ವಕ್ಕೆ ಒಳ್ಳೆಯ ಸಂದೇಶ ಸಾರಿದಂತಾಗುತ್ತದೆ ಎಂದರು.