ಕಾಸರಗೋಡು, ಏ 22 (DaijiworldNews/MS): ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಕಾಸರಗೋಡು ಅಬಕಾರಿ ದಳದ ವಿಶೇಷ ತಂಡ ನಾಲ್ವರನ್ನು ಬಂಧಿಸಿದೆ.
ಕಾಸರಗೋಡಿನ ಸಮೀರ್ , ಶೇಖ್ ಅಬ್ದುಲ್ ನೌಶಾದ್ , ಶಾಫಿ ಹಾಗೂ ದಕ್ಷಿಣ ಕನ್ನಡದ ಅಬೂಬಕ್ಕರ್ ಸಿದ್ದಿಕ್ ಬಂಧಿತರು. ಕಾರಿನ ಸೀಟಿನೊಳಗಡೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ 200 ಗ್ರಾಂ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ರಾತ್ರಿ ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಅಬಕಾರಿ ದಳದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಆದೂರು ಸಮೀಪ ಕಾರನ್ನು ಪತ್ತೆಹಚ್ಚಿದ ಸಿಬಂದಿಗಳು ಕಿಲೋ ಮೀಟರ್ ಗಳಷ್ಟು ಬೆನ್ನಟ್ಟಿ ಕುಂಟಾರು ಎಂಬಲ್ಲಿದ್ದ ಅಬಕಾರಿ ದಳದ ವಾಹನ ಅಡ್ಡಗಟ್ಟಿ ಕಾರನ್ನು ತಡೆಹಿಡಿದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.
ಕಾರಿನ ಸೀಟಿನೊಳಗಡೆ ಯಾರಿಗೂ ಸಂಶಯ ಬರದಂತೆ ಮಾದಕವಸ್ತುವನ್ನು ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ಮಾದಕ ವಸ್ತುವನ್ನು ಮಾರಾಟಕ್ಕೆಂದು ತಂದಿರುವುದಾಗಿ ಬಂಧಿತರು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ . ಇವರು ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮಾದಕ ವಸ್ತು ತಲಪಿಸುವ ಪ್ರ,ಮುಖ ಸೂತ್ರಧಾರರು ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡಿರುವ ಮಾದಕ ವಸ್ತುವಿನ ಮೌಲ್ಯ ಸುಮಾರು ಹತ್ತು ಲಕ್ಷ ಎಂದು ಅಂದಾಜಿಸಲಾಗಿದೆ.