ಉಡುಪಿ, ಏ 22 (DaijiworldNews/DB): ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಹಿಜಾಬ್ ಧರಿಸಿಯೇ ಬರೆಯುವುದಾಗಿ ಪಟ್ಟು ಹಿಡಿದಿದ್ದ ಉಡುಪಿಯ ಇಬ್ಬರು ಹಿಜಾಬ್ ಹೋರಾಟಗಾರ್ತಿಯರು ಅವಕಾಶ ನಿರಾಕರಿಸಿದ ಕಾರಣ ಪರೀಕ್ಷೆ ಬರೆಯದೆ ವಾಪಸ್ಸಾಗಿದ್ದಾರೆ.
ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಆರಂಭವಾಗಿದ್ದು, ಉಡುಪಿಯಲ್ಲಿ ಆರು ಮಂದಿ ಹಿಜಾಬ್ ಹೋರಾಟಗಾರ್ತಿಯರ ಪೈಕಿ ಆಲಿಯಾ ಅಸ್ಸಾದಿ ಮತ್ತು ರೇಶಮ್ ಎಂಬ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇಬ್ಬರೂ ನಿನ್ನೆವರೆಗೂ ಪ್ರವೇಶ ಪತ್ರ ಪಡೆದಿರಲಿಲ್ಲ. ಇಂದು ಪರೀಕ್ಷೆ ಆರಂಭವಾಗುವ ಮುನ್ನ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಪಡೆದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಆದರೆ ಹಿಜಾಬ್ ತೆಗೆಯಲು ಒಪ್ಪದೆ ಆಲಿಯಾ ಅಸಾದಿ ಹಾಗೂ ರೇಶಮ್ ಪರೀಕ್ಷೆ ಬರೆಯುವುದಕ್ಕೆ ಬಂದಾಗ, ಪರೀಕ್ಷಾ ಕೇಂದ್ರದಲ್ಲಿ ಅವಕಾಶ ನಿರಾಕರಿಸಲಾಯಿತು.
ಇದರಿಂದ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಇಬ್ಬರು ವಿದ್ಯಾರ್ಥಿನಿಯರು ಪಟ್ಟು ಹಿಡಿದು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಹೈಡ್ರಾಮ ಸೃಷ್ಟಿಸಿದರು. ಆದರೆ ಕೋರ್ಟ್ ಆದೇಶವಿರುವುದರಿಂದ ಹಿಜಾಬ್ ತೆಗೆದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಸಿಬಂದಿ ಸೂಚಿಸಿದ್ದರಿಂದ ಬಳಿಕ ಪರೀಕ್ಷೆಗೆ ಹಾಜರಾಗದೇ ಮನೆಗೆ ಹಿಂತಿರುಗಿದ್ದಾರೆ.