ಮಂಗಳೂರು, ಏ 22 (DaijiworldNews/MS): ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಕುರಿತು ಮಾನಹಾನಿ ಬರಹ ಬರೆದು ಮಾನಸಿಕವಾಗಿ ಕಿರುಕುಳ ನೀಡಿದ್ದ ಆರೋಪಿಗಳಾದ ಕಾಲೇಜೊಂದರ ಸಂಚಾಲಕ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ತಾರಾನಾಥ (32) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರು ಆರೋಪಿಗಳು ಹಾಗೂ 58 ವರ್ಷದ ಉಪನ್ಯಾಸಕಿ ಬಂಟ್ವಾಳದಲ್ಲಿ ಕಾಲೇಜ್ ವೊಂದರಲ್ಲಿ ಸಹೋದೋಗ್ಯಿಗಳಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಕಾಲೇಜ್ ಆಡಳಿತ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಡೆಪ್ಯೂಟೇಷನ್ ನಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಆ ಬಳಿಕ ಆರೋಪಿಗಳು ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್ನಲ್ಲಿ ಈ ಪ್ರೊಫೆಸರ್ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಹಾಕಿದ್ದರು. 10 ದಿನಗಳ ಅವಧಿಯಲ್ಲಿ ಸುಮಾರು 800 ಅಶ್ಲೀಲ ಕರೆಗಳು ಬಂದಿದ್ದು, ಕಿರುಕುಳ ಸಹಿಸಿಕೊಳ್ಳಲಾಗದೆ ಸಾವಿಗೆ ಶರಣಾಗಲು ಯೋಚಿಸಿದ್ದಾಗಿ ಉಪನ್ಯಾಸಕಿ ಹೇಳಿದ್ದಾರೆ. ಕೊನೆಯದಾಗಿ ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಅಶ್ಲೀಲ ಕರೆಗಳನ್ನು ಕಳುಹಿಸುತ್ತಿದ್ದ ಫೋನ್ ನಂಬರ್ ಗಳಿಂದ ಕೆಲವೊಂದು ಸಾಕ್ಷ್ಯಧಾರ ಸಂಗ್ರಹಿಸಲಾಗಿದ್ದು, ತನಿಖೆ ವೇಳೆಯಲ್ಲಿ ಸತ್ಯಾಂಶ ಹೊರಗೆ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.