ಮಂಗಳೂರು, ಏ 21 (DaijiworldNews/SM): ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗಿದೆ.
ದ.ಕ. ಜಿಲ್ಲೆ ಸೇರಿದಂತೆ ಉಡುಪಿ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ವತಿಯಿಂದ ಎಲ್ಲಾ ತಯಾರಿಗಳು ನಡೆದಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಈಗಾಗಲೇ ನಿಷೇಧಾಜ್ಞೆ ಹೊರಡಿಸಲಾಗಿದೆ.
ಇನ್ನೊಂದೆಡೆ ಹಿಜಾಬ್ ವಿವಾದ ಆರಂಭಗೊಂಡ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಎಲ್ಲಾ ಕೇಂದ್ರಗಳ ಸುತ್ತ ನಿಷೇಧಾಜ್ಞೆಯ ಜೊತೆಗೆ ಭದ್ರತೆ ಒದಗಿಸಲಾಗಿದೆ. ಇನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿದ್ದು, ಇದರೊಂದಿಗೆ ಧಾರ್ಮಿಕ ಸಂಕೇತ ಹೋಲುವ ಯಾವುದೇ ವಸ್ತ್ರಗಳಿಗೆ ಅವಕಾಶವಿಲ್ಲ ಎನ್ನುವ ಸ್ಪಷ್ಟವಾದ ಆದೇಶವನ್ನು ಹೊರಡಿಸಲಾಗಿದೆ.