ಕಾಸರಗೋಡು, ಏ 21 (DaijiworldNews/SM): ಕೋರೆ ಮಾಲಕರಿಂದ ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಕಾಸರಗೋಡು ಉಪ ಜಿಲ್ಲಾಧಿಕಾರಿ ಸಾಜಿದ್ ಎಸ್. ಎ. ನನ್ನು ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಎಂಡೋಸಲ್ಫಾನ್ ಸ್ಪೆಷಲ್ ಸೆಲ್ ನ ಜಿಲ್ಲಾಧಿಕಾರಿಯಾಗಿರುವ ಸಾಜಿದ್, ನೆಟ್ಟಣಿಗೆ, ನಾಟೆಕಲ್ಲು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕೋರೆ ಮಾಲಕರಿಂದ ಲಂಚ ಪಡೆದಿರುವುದಾಗಿ ಕಂದಾಯ ಇಲಾಖೆಗೆ ದೂರು ಲಭಿಸಿತ್ತು. ಈ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಉಪ ಜಿಲ್ಲಾಧಿಕಾರಿ ತನ್ನ ಅಧಿಕಾರಿಗಳನ್ನು ಬಳಸಿ ಕೋರೆ ಮಾಲಕರಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿತ್ತು ಕಳೆದ ಮಾರ್ಚ್ 1ರಂದು ಈ ಪ್ರದೇಶಕ್ಕೆ ತೆರಳಿರುವ ಬಗ್ಗೆಯೂ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.
ಅಧಿಕೃತ ವಾಹನ ಬಳಸಿ ಉಪಜಿಲ್ಲಾಧಿಕಾರಿ ಲಂಚ ಪಡೆದಿದ್ದರೆನ್ನಲಾಗಿದೆ. ಇದಲ್ಲದೆ ಫೆಬ್ರವರಿ 28 ಹಾಗೂ ಮಾರ್ಚ್ 5ರಂದು ಕೋರೆ ಪ್ರದೇಶಕ್ಕೆ ತೆರಳಿರುವ ದಾಖಲೆ ಕಂದಾಯ ಇಲಾಖೆಗೆ ಲಭಿಸಿದೆ.
ಘಟನೆಯ ಬಗ್ಗೆ ಸಂಪೂರ್ಣ ತನಿಖೆಗೆ ಕಂದಾಯ ಇಲಾಖೆ ಆದೇಶ ನೀಡಿದ್ದು, ಇದರಂತೆ ತನಿಖೆ ನಡೆಯುತ್ತಿದೆ.