ಮಂಗಳೂರು, ಏ 21 (DaijiworldNews/SM): ನಗರದ ಹೊರವಲಯದ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಮಸೀದಿ ಕಟ್ಟಡದಲ್ಲಿ ಪ್ರಾಚೀನ ಕಾಲದ ದೇವಾಲಯದ ಮಾದರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳ ಮುಖಂಡರ ದೂರಿನನ್ವಯ ಸ್ಥಳಕ್ಕೆ ತಹಶೀಲ್ದಾರ್ ಪುರಂದರ್ ಅವರು ಭೇಟಿಯನ್ನು ಕೊಟ್ಟಿದ್ದಾರೆ.
ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿಯಿದ್ದು, ಇದರ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವೇಳೆ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಶೈಲಿ ಪತ್ತೆಯಾಗಿದೆ.
ಕಟ್ಟಡದ ಒಳಗೆ ಮತ್ತು ಹೊರಗಡೆ ನೋಡುವಾಗ ಪ್ರಾಚೀನ ದೇವಸ್ಥಾನದ ಕಟ್ಟಡದ ಶೈಲಿಯಲ್ಲಿ ಕಂಡು ಬರುತ್ತಿವೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಕೊಟ್ಟಿದ್ದು ಎರಡೂ ಸಮುದಾಯಗಳ ಮುಖಂಡರ ಜೊತೆ ಶಾಂತಿ ಮಾತುಕತೆ ನಡೆಸಿದ್ದಾರೆ. ಎರಡೂ ಸಮುದಾಯದ ಮುಖಂಡರು ಅಧಿಕಾರಿಗಳ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಸಾರ್ವಜನಿಕರೂ ಕೂಡ ಶಾಂತಿಯುತವಾಗಿ ಪ್ರಕರಣ ಇತ್ಯರ್ಥಗೊಳಿಸಲು ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿಯವರು ಕೂಡ ಮನವಿ ಮಾಡಿಕೊಂಡಿದ್ದಾರೆ.