ಬೆಂಗಳೂರು, ಡಿ 29(SM): '2019ರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ನಮಗೆ 12 ಸ್ಥಾನಗಳು ಬೇಕು' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ದೇವೇಗೌಡರು, 'ಯಾವುದೇ ಸಮಸ್ಯೆಗಳು ಉಂಟಾಗದಂತೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ. ಜನವರಿ 8ರಂದು ಲೋಕಸಭೆ ಅಧಿವೇಶನ ಮುಗಿಯಲಿದ್ದು, ಜನವರಿ 15ರೊಳಗೆ ರಾಹುಲ್ ಗಾಂಧಿ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಾಗುತ್ತದೆ' ಎಂದಿದ್ದಾರೆ.
'ಲೋಕಸಭೆ ಅಧಿವೇಶನ ಮುಗಿದ ಬಳಿಕ ಏಳೆಂಟು ಜಿಲ್ಲೆಗಳಿಗೆ ನಾವು ಪ್ರವಾಸ ಮಾಡುತ್ತೇವೆ. ಮಾರ್ಚ್ ಮೊದಲ ವಾರದಲ್ಲೇ ಪ್ರವಾಸ ಆರಂಭಿಸುತ್ತೇವೆ. ಮೈತ್ರಿ ಸರ್ಕಾರ ಮಾಡಿದ್ದೇವೆ ಎಂದು ಸಲುಗೆ ಕೊಡುವುದಿಲ್ಲ. ಪ್ರಾದೇಶಿಕ ಪಕ್ಷ ಉಳಿಯುವುದು ಮುಖ್ಯ' ಎಂದು ತಿಳಿಸಿದರು.
ಇನ್ನು ಖಾತೆ ಹಂಚಿಕೆಯಲ್ಲಿ ಅಸಮಾಧಾನವಿಲ್ಲ. ಉಳಿದುಕೊಂಡಿರುವ ನಮ್ಮ ಎರಡು ಖಾತೆಗಳನ್ನು ಹಂಚುವುದು ಸ್ಪಲ್ಪ ತಡವಾಗಬಹುದು. ಮೊದಲು ಲೋಕಸಭೆ ಚುನಾವಣೆಗೆ ಗಮನ ಕೊಡಬೇಕಿದೆ' ಎಂದರು.