ಮಂಗಳೂರು, ಏ 21 (DaijiworldNews/DB): ಏಕಾಂಗಿಯಾಗಿ ಮೊದಲ ಬಾರಿಗೆ ರೈಲು ಪ್ರಯಾಣ ಮಾಡಿದ ಬಾಲಕ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕಂಗಾಲಾದ ಪೋಷಕರು ರೈಲ್ವೇ ಇಲಾಖೆಗೆ ಟ್ವೀಟ್ ಮಾಡಿ 34 ನಿಮಿಷಗಳ ಒಳಗೆಯೇ ಪುತ್ರನಿಂದ ಕರೆ ಬಂದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ.
ತತ್ಕ್ಷಣದ ಪ್ರತಿಕ್ರಿಯೆಗೆ ಹೆಸರಾದ ಕೇಂದ್ರ ರೈಲ್ವೇ ಇಲಾಖೆಯು ಈ ಹಿಂದೆಯೂ ಹಲವಾರು ಪ್ರಯಾಣಿಕರಿಗೆ ಸ್ಪಂದಿಸಿದೆ. ಅದರಂತೆ ಇದೀಗ ಮಂಗಳೂರಿನಿಂದ ಕೊಟ್ಟಾಯಂಗೆ ಪ್ರಯಾಣಿಸಿದ ಬಾಲಕನ ವಿಚಾರದಲ್ಲಿಯೂ ಅದೇ ಬದ್ಧತೆಯನ್ನು ಇಲಾಖೆ ಮೆರೆದಿದೆ. ಬಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದಾಗಿ ಇಲಾಖೆಗೆ ಟ್ವೀಟ್ ಮಾಡಿದ 34 ನಿಮಿಷದ ಒಳಗೆ ಬಾಲಕನ ಕರೆಯನ್ನು ಪೋಷಕರು ಸ್ವೀಕರಿಸಿದ್ದಾರೆ.
ಮಂಗಳೂರಿನ ಅಟೋಮೊಬೈಲ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿರುವ ಕಿಶನ್ ರಾವ್ ಅವರ 16 ವರ್ಷದ ಪುತ್ರ ಶಂತನು ಏ. 19ರಂದು ಬೆಳಗ್ಗೆ 5 ಗಂಟೆಗೆ ಕೊಟ್ಟಾಯಂನಲ್ಲಿರುವ ತಮ್ಮ ಅಜ್ಜನ ಮನೆಗೆ ಮಂಗಳೂರಿನಿಂದ ಪ್ರಯಾಣ ಬೆಳೆಸಿದ್ದನು. ಬಾಲಕ ಏಕಾಂಗಿಯಾಗಿ ತೆರಳುವ ಕಾರಣ ಹೆತ್ತವರು ಆತನ ಕೈಗೆ ಮೊಬೈಲ್ ಫೋನ್ ನೀಡಿದ್ದರು. ಕೊಟ್ಟಾಯಂ ನಿಲ್ದಾಣದಲ್ಲಿ ಸಂಬಂಧಿಗಳು ಆತನನ್ನು ಬರಮಾಡಿಕೊಳ್ಳುವವರಿದ್ದರು. ಈತ ಪ್ರಯಾಣಿಸಿದ ಪರಶುರಾಮ ಎಕ್ಸ್ಪ್ರೆಸ್ ಆತ ಕ್ರಮಿಸಬೇಕಿದ್ದ ಎರ್ನಾಕುಲಂ ಹಾಗೂ ಕೊಟ್ಟಾಯಂ ನಡುವಿನ ಪಿರವಂ ಎಂಬಲ್ಲಿನ ರೈಲು ನಿಲ್ದಾಣವನ್ನು ಮಧ್ಯಾಹ್ನ 2.30ಕ್ಕೆ ತಲುಪಬೇಕಿತ್ತು.
ಬೆಳಗ್ಗೆ 10 ಗಂಟೆ ಸುಮಾರಿಗೆ ಪೋಷಕರು ಆತನಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಪದೇ ಪದೇ ಕರೆ ಮಾಡಿದಾಗಲೂ ಅದೇ ರೀತಿ ಮುಂದುವರಿದಿತ್ತು.
ಇದರಿಂದ ಆತಂಕಗೊಂಡ ತಂದೆ ಕಿಶನ್ ರಾವ್ ಅವರು, ಪುತ್ರನ ರೈಲ್ವೆ ಟಿಕೆಟ್ ನಂಬರ್ ಸಹಿತ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ತತ್ಕ್ಷಣ ಕಾರ್ಯಪ್ರವೃತ್ತವಾದ ರೈಲ್ವೇ ಸಚಿವಾಲಯ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಬಾಲಕ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಪರಿಶೀಲಿಸಿದಾಗ ಆತ ಸುರಕ್ಷಿತವಾಗಿರುವುದನ್ನು ಖಾತರಿಪಡಿಸಿಕೊಂಡು ತಂದೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ತತ್ಕ್ಷಣ ಆತ ತನ್ನ ತಂದೆಗೆ ಕರೆ ಮಾಡಿ ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದಾನೆ. ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಫೋನ್ ಹೇಗೆ ಸ್ವಿಚ್ ಆಫ್ ಆಯಿತು ಎಂಬುದು ಗೊತ್ತಾಗಿಲ್ಲ ಎಂದು ಆತ ತಿಳಿಸಿದ್ದಾನೆ. ಈ ಎಲ್ಲಾ ಪ್ರಕ್ರಿಯೆ ಕೇವಲ 34 ನಿಮಿಷದಲ್ಲಿಯೇ ನಡೆದಿದ್ದು, ಕಿಶನ್ ರಾವ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.