ಕಡಬ, ಡಿ 30(SM): ಶಾಲೆಗೆಂದು ಮನೆಯಿಂದ ತೆರಳಿದ ಅತ್ತ ಶಾಲೆಗೂ ತೆರಳದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯನ್ನು ಕಡಬ ಪೊಲೀಸರು ಹುಣಸೂರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆತೂರು ಸಮೀಪದ ಖಾಸಗಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಗುರುವಾರದಂದು ಮುಂಜಾನೆ ಎಂದಿನಂತೆ ಶಾಲೆಗೆಂದು ತನ್ನ ಆಲಂಕಾರಿನ ಮನೆಯಿಂದ ತೆರಳಿದ್ದಳು.
ಶಾಲೆಗೆ ಹೋಗದೆ ಪರೀಕ್ಷೆಗೆ ಗೈರು ಹಾಜರಾದ ಬಗ್ಗೆ ಅಧ್ಯಾಪಕರು ಮನೆಯವರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಂದೆ ಕಡಬ ಠಾಣೆಗೆ ದೂರು ನೀಡಿದ್ದರು.
ಅದರಂತೆ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ವಿದ್ಯಾರ್ಥಿನಿಗಾಗಿ ಹುಡುಕಾಡಿದ್ದು, ಅಂತಿಮವಾಗಿ ಹುಣಸೂರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.