ಮಂಗಳೂರು, ಏ 21 (DaijiworldNews/DB): ಮುಕ್ಕಚ್ಚೇರಿಯಲ್ಲಿ 2017ರಲ್ಲಿ ನಡೆದಿದ್ದ ಮುಕ್ಕಚ್ಚೇರಿ ಜುಬೇರ್ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ಮುಕ್ಕಚ್ಚೇರಿ ಜುಬೇರ್
ನಿಜಾಮ್ ಅಲಿಯಾಸ್ ನಿಜಾಮುದ್ದೀನ್, ತಾಜು ಅಲಿಯಾಸ್ ತಾಜುದ್ದೀನ್, ಮುಸ್ತಾಫ್ ಅಲಿಯಾಸ್ ಮೊಹಮ್ಮದ್ ಮುಸ್ತಾಫ ಶಿಕ್ಷೆಗೊಳಗಾದ ಅಪರಾಧಿಗಳು.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮಸೀದಿ ಮುಂಭಾಗ ಈ ಕೊಲೆ ನಡೆದಿತ್ತು. ಆಗ ಪೊಲೀಸ್ ನಿರೀಕ್ಷಕರಾಗಿದ್ದ ಗೋಪಿ ಕೃಷ್ಣ ಕೆ. ಆರ್. ಅವರು ತನಿಖೆ ನಡೆಸಿ ಆರೋಪಿಗಳ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬಳಿಕ ಐವರು ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಮೂವರು ಸಿಕ್ಕಿ ಬಿದ್ದಿದ್ದರು.
ಆರೋಪಿಗಳ ಪೈಕಿ ಪೈಕಿ ಅಲ್ತಫ್ ಮೃತಪಟ್ಟಿದ್ದು, ಪ್ರಮುಖ ಆರೋಪಿ ಸುಹೈಲ್ ನಾಪತ್ತೆಯಾಗಿದ್ದ. ಪೊಲೀಸರ ವಶವಾಗಿದ್ದ ಮೂವರು ಅಪರಾಧಿಗಳಿಗೆ ಇದೀಗ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ದಂಪ ಪಾವತಿಗೆ ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಜೈಲು ಮತ್ತು ಐಪಿಸಿ ಕಲಂ 326ರಡಿ ಎಸಗಿದ ಅಪರಾಧಕ್ಕೆ ಐದು ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ, ದಂಪ ಕಟ್ಟಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ 50 ಸಾವಿರ ರೂ. ಗಳನ್ನು ಕೊಲೆಯಾದ ಜುಬೇರ್ ತಂದೆಗೆ ನೀಡಬೇಕು ಹಾಗೂ ಗಾಯಾಳುವಾಗಿದ್ದ ಇಲಿಯಾಸ್ ಅವರಿಗೆ 20 ಸಾವಿರ ರೂ. ನೀಡಲು ಮತ್ತು ಮೃತನ ತಂದೆಗೆ ಹಾಗೂ ಗಾಯಾಳುವಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಅಭಿಯೋಜಕ ನಾರಾಯಣ ಸೇರಿಗಾರ್ ಯು. ಸರಕಾರದ ಪರವಾಗಿ ವಾದ ಮಂಡಿಸಿದ್ದರು.