ಮಂಗಳೂರು, ಏ 20 (DaijiworldNews/HR): ಯಕ್ಷಗಾನ ಕ್ಷೇತ್ರವು ಈ ಮಟ್ಟಕ್ಕೆ ವಿಜೃಂಭಿಸಲು ಕಾರಣ ಬಲಿಪ ಪರಂಪರೆಯ ಹಾಡುಗಳು. ಇಂದಿನ ಯುವ ಜನಾಂಗವನ್ನು ಯಕ್ಷಗಾನದ ಸಾಂಪ್ರದಾಯಿಕ ಹಾಡುಗಳಿಂದಲೇ ಆಕರ್ಷಿಸಿದವರು ಯುವ ಭಾಗವತರಾದ ಪ್ರಸಾದ ಬಲಿಪರು. ಇವರ ಅಗಲುವಿಕೆ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅಣ್ಣ ತಮ್ಮಂದಿರಂತೆ ಇದ್ದ ನಮ್ಮ ಒಡನಾಟ ಆ ದೇವರಿಗೆ ಸಹಿಸಿಕೊಳ್ಳಲು ಅಸಾಧ್ಯವಾಯಿತೇ ಎಂದು ತನ್ನ ಮನದಾಳದ ದು:ಖವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಬಲ್ಲಾಲ್ ಭಾಗ್ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡ ಶೃದ್ಧಾಂಜಲಿ ಸಭೆಯಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಹೇಳಿದರು.
ಯಕ್ಷಗಾನದಲ್ಲಿ ಹಾಡುಗಾರಿಕೆಗೆ ಎಷ್ಟೋ ಮಂದಿ ಇದ್ದಾರೆ. ಆದರೆ ಭಾಗವತಿಕೆಯ ತಿಳುವಳಿಕೆ ಇರುವವರು ತುಂಬಾ ಕಡಿಮೆ. ಅಂತಹ ಭಾಗವತರಲ್ಲಿ ಪ್ರಸಾದ್ ಬಲಿಪರು ಶ್ರೇಷ್ಠ ಭಾಗವತರು. ಅವರ ಖಾಯಿಲೆಯ ಸೂಕ್ಷಮತೆಯು 4 ವರ್ಷದ ಹಿಂದೆಯೇ ಗೊತ್ತಾಗುತ್ತಿದ್ದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತೋ ಏನೊ ಎಂಬುದಾಗಿ ಪಟ್ಲ ಸತೀಶ್ ಶೆಟ್ಟಿ ನುಡಿದರು.
ಯಕ್ಷಗಾನ ಕಲೆಯ ವಿದ್ವಾಂಸರು, ವಿಮರ್ಶಕರು ಆದ ಫ್ರೋ.ಡಾ. ಪ್ರಭಾಕರ ಜೋಷಿ ಮಾತನಾಡಿ, ಯಕ್ಷಗಾನ ಕ್ಷೇತ್ರವನ್ನು ನಿಂತ ನೀರಾಗಲು ಬಿಡದೆ ಹರಿವ ನದಿಯಂತೆ ಮುನ್ನಡೆಸುವ ಕಾರ್ಯವನ್ನು ನಡೆಸಿದ ಕೀರ್ತಿ ಬಲಿಪ ಕುಟುಂಬಕ್ಕೆ ಸಲ್ಲುತ್ತದೆ. ಬಲಿಪ ಕುಟುಂಬ ಯಕ್ಷಗಾನದಿಂದ ಎಷ್ಟು ಶ್ರೀಮಂತಿಕೆಯನ್ನು ಪಡೆದಿದ್ದಾರೋ, ಅವರ ಮನೆಯ ಆರ್ಥಿಕ ಪರಿಸ್ಥಿತಿಯು ಅಷ್ಟೇ ಬಡತನದಿಂದ ಕೂಡಿದೆ. ಈಗಾಗಲೇ ಪ್ರಸಾದ ಬಲಿಪರ ಆರೋಗ್ಯ ಚಿಕಿತ್ಸೆಗೆ ಪಟ್ಲ ಟ್ರಸ್ಟ್ ಸ್ಪಂದಿಸಿದ್ದು, ಮನೆಯವರು ಅಪೇಕ್ಷಿಸಿದಲ್ಲಿ ಸಹಾಯ ಸಹಕಾರ ನೀಡಲು ಫೌಂಡೇಶನ್ ಸದಾ ಸಿದ್ಧವಿದೆ ಎಂದರು.
ಪ್ರೋಫೆಸರ್ ಭಾಸ್ಕರ್ ರೈ ಕುಕ್ಕುವಳ್ಳಿ , ಯಕ್ಷಗಾನ ಕ್ಷೇತ್ರಕ್ಕೆ ಬಲಿಪ ಕುಟುಂಬದ ಕೊಡುಗೆ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂತಾಪ ಸಲ್ಲಿಸಿದರು.
ಸಭೆಗೆ ಆಗಮಿಸಿದ ಸಭಿಕರಲ್ಲಿ ಯಕ್ಷಗಾನ ಕಲಾವಿದರಾದ ದಿವಾಣ ಶಿವಶಂಕರ ಭಟ್, ಹವ್ಯಾಸಿ ಭಾಗವತರಾದ ಸುಧಾಕರ್ ಸಾಲ್ಯಾನ್, ಹಿರಿಯ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಭರತನಾಟ್ಯ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ್ , ಪ್ರಸಾದ ಬಲಿಪರ ಗುಣಗಾನದೊಂದಿಗೆ ನುಡಿನಮನಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಬಹರೈನ್ ಘಟಕದ ಪ್ರಮುಖರಾದ ರಮೇಶ್ ಮಂಜೇಶ್ವರ, ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಆರತಿ ಆಳ್ವ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.