ಕುಂದಾಪುರ ಡಿ30: ನಿನ್ನೆ ತಡರಾತ್ರಿ ಕುಂದಾಪುರ ಬಳ್ಕೂರು ಸಮೀಪ ನಡೆದ ರಸ್ತೆ ಅಪಘಾತವೊಂದರಲ್ಲಿ ಅಯ್ಯಪ್ಪ ವೃತಧಾರಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಬಲ್ಕೂರು ಸಮೀಪದ ಬಿ.ಎಚ್ ಕ್ರಾಸ್ ಹತ್ತಿರ ಬೈಕ್ ಹಾಗೂ ಬೊಲೆರೋ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಮೃತಪಟ್ಟ ವ್ಯಕ್ತಿಯನ್ನು ಜನ್ಸಾಲೆ ಗ್ರಾಮದ ರವಿ ಪೂಜಾರಿ ಎಂದು ಗುರುತಿಸಲಾಗಿದೆ. ಮುಂದಿರುವ ಬಸ್ಸೊಂದನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿದ ಬೊಲೆರೋ ವಾಹನದ ಚಾಲಕ ಎದುರು ದಿಶೆಯಿಂದ ಬಂದ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೊಲೆರೋ ಹಾಗೂ ಬೈಕ್ ಎರಡೂ ಹತ್ತಿರದ ಹೊಲಕ್ಕೆ ಎಸೆಯಲ್ಪಿಟ್ಟಿವೆ. ಅಪಘಾತದ ಅಘಾತಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿಯ ಪ್ರಕಾರ ಅಪಘಾತ ನಡೆದ ತಕ್ಷಣ ಬೊಲೆರೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳದಲ್ಲಿ ಜನಸ್ತೋಮ ಸೇರುತ್ತಿದ್ದಂತೆಯೇ ಸ್ಥಳೀಯ ಪೋಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಭಾಯಿಸಲು ಮುಂದಾಗಿದ್ದಾರೆ. ತಕ್ಷಣವೇ ಬೊಲೆರೋ ಚಾಲಕನ ಬಂಧನವಾಗಬೇಕೆಂದು ಜನಸ್ತೋಮ ಪಟ್ಟು ಹಿಡಿಯುತ್ತಿದ್ದಂತೆ ಪೋಲಿಸ್ ಸಿಬ್ಬಂಧಿಯೋರ್ವರು ಆಡಿದ ಮಾತುಗಳು ಸ್ಥಳೀಯರನ್ನು ಕುಪಿತಗೊಳ್ಳುವಂತೆ ಮಾಡಿವೆ. ಮಾತುಕತೆ ತಾರಕಕ್ಕೇರಿ ಸಿಬ್ಬಂಧಿಯ ಕ್ಷಮೆಯಾಚನೆ ವರೆಗೆ ವಾಹನ ಸಂಚಾರಕ್ಕೆ ಅನುವು ಮಾಡುವುದಿಲ್ಲ ಎಂದ ಸ್ಥಳೀಯರು ಕೆಲ ಕಾಲ ರಸ್ತೆತಡೆ ನಡೆಸಿದ್ದಾರೆ.
ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿದ ಕಂಡ್ಲೂರು ಪೋಲಿಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಮಾತುಕತೆಯ ಮೂಲಕ ಪ್ರತಿಭಟನಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕ ಬಂಧನದ ಭರವಸೆಯ ನಂತರ ಸ್ಥಳೀಯರು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.