ಮಂಗಳೂರು, ಏ 20 (DaijiworldNews/DB): ಮಾರಿಗುಡಿ ಎಂಬ ನಕಲಿ ಇನ್ಸ್ಟಾಗ್ರಾಂ ಖಾತೆ ಮೂಲಕ ಕೋಮು ಭಾವನೆ ಕೆರಳಿಸುವ ಪೋಸ್ಟ್ಗಳನ್ನು ಹಾಕುತ್ತಿದ್ದ ಬೆಳ್ತಂಗಡಿ ಮೂಲದ ಯುವಕನೋರ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿಯ ಮುಹಮ್ಮದ್ ಅಝಲ್ ( 20 ) ಎಂದು ಗುರುತಿಸಲಾಗಿದೆ. ಕೋಮು ಗಲಭೆ ಸೃಷ್ಟಿಸುವ ಹುನ್ನಾರದಿಂದ ಈತ ಮಾರಿ ಗುಡಿ ಎಂಬ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಕೋಮು ಸಂಬಂಧಿಸಿದ ಪೋಸ್ಟ್ ಮಾಡುತ್ತಿದ್ದ. ಈ ಸಂಬಂಧ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಉಲಂಘಿಸಿ ಮಂಗಳೂರಿನ ರಥಬೀದಿ ಕಾಲೇಜಿನಲ್ಲಿ ಐವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ ಅವರನ್ನು ಪ್ರಶ್ನಿಸಿದ್ದ. ಆ ವಿದ್ಯಾರ್ಥಿ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆರೋಪಿಯು ವಿದ್ಯಾರ್ಥಿಯ ಫೋಟೋವಿರುವ ಪೋಸ್ಟ್ನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿ ಶ್ರದ್ದಾಂಜಲಿ ಎಂಬ ತಲೆಬರಹ ಹಾಕಿದ್ದ. ಅಲ್ಲದೆ ಕೊಲೆ ಬೆದರಿಕೆಯನ್ನೂ ಸಾರ್ವಜನಿಕವಾಗಿ ಹಾಕಲಾಗಿತ್ತು. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದ ಹಾಗೆ ನಿನ್ನನ್ನೂ ಕೊಲೆ ಮಾಡುವುದಾಗಿ ವಿದ್ಯಾರ್ಥಿಗೆ ವಾಟ್ಸಾಪ್ ಮುಖಾಂತರ ಆರೋಪಿ ಬೆದರಿಕೆ ಹಾಕಿದ್ದ. ಈ ಎಲ್ಲಾ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿ ಆತನ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿತ್ತು.