ಮಂಗಳೂರು, ಡಿ28(SS): ನಗರದ ಫಳ್ನೀರ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಆಗಮಿಸಿದ ಯುವಕನೊಬ್ಬ ವೈದ್ಯೆಯೊಬ್ಬರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಜಪ್ಪು ನಿವಾಸಿ ಅಬ್ದುಲ್ ರಹಿಮಾನ್ (35) ವೈದ್ಯೆಗೆ ಹಲ್ಲೆ ಮಾಡಿದ ಆರೋಪಿ.
ಡಿ. 26ರಂದು ರಹಿಮಾನ್ ಮತ್ತು ಆತನ ಅಕ್ಕ ತಮ್ಮ ತಂದೆಗೆ ಚಿಕಿತ್ಸೆ ನೀಡಲು ನಗರದ ಫಳ್ನೀರ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಈ ವೇಳೆ ಚಿಕಿತ್ಸೆಯ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ರಹಿಮಾನ್ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಮಹಿಳಾ ವೈದ್ಯೆ ಮಧ್ಯೆ ಬಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದು, ಇದರಿಂದ ಕೋಪಗೊಂಡ ಆತ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತ್ರವಲ್ಲ, ವೈದ್ಯೆಯ ಕೆನ್ನೆಗೆ ಹೊಡೆದು, ಗಲಾಟೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಸ್ಪತ್ರೆಯ ವೈದ್ಯರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.