ಮಂಗಳೂರು, ಏ 20 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆ ಹೊರಗುತ್ತಿಗೆ ಮೂಲಕ ಭದ್ರತಾಸಿಬ್ಬಂದಿಯನ್ನು ಒದಗಿಸುವ ನಿರ್ವಹನಾ ಕಾಮಗಾರಿ ಇ ಟೆಂಡರ್ ನಲ್ಲಿ ನಿಗದಿಪಡಿಸಿರುವ ಮಾನದಂಡವನ್ನು ಉಲ್ಲಂಘಿಸಿ ಕರ್ತವ್ಯಲೋಪ ಆರೋಪದಲ್ಲಿ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಸಹಾಯಕ ಎಂಜಿನಿಯರ್ ರಾಜೇಶ್ ಮತ್ತು ಡ್ರಾಫ್ಟ್ಮೆನ್ ಪುಷ್ಪರಾಜ್ ಅಮಾನತಿಗೆ ಒಳಗಾದವರು. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕದ್ರಿ ಮತ್ತು ಮಂಗಳೂರು ಪ್ರದೇಶದ ಹೊರಗುತ್ತಿಗೆ ನೇಮಕದಲ್ಲಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಪಾಲಿಕೆ ನಿಯಮ ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಿಯಮ ಬಾಹಿರವಾಗಿ ಸಹಾಯಕ ಎಂಜಿನಿಯರ್ ಮತ್ತು ಡ್ರಾಫ್ಟ್ಮೆನ್ ನೇಮಿಸಿರುವುದು ಆಯುಕ್ತರ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಿ ಅವರಿಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ರಾಜೇಶ್ ಅವರು ಪಾಲಿಕೆ ಸಿಬ್ಬಂದಿ ಅಲ್ಲ, ಅವರು ಲೋಕೋಪಯೋಗಿ ಇಲಾಖೆಯಿಂದ ಎರವಲು ಮೇಲೆ ಪಾಲಿಕೆಯಲ್ಲಿ ಕರ್ತವ್ಯದಲ್ಲಿದ್ದರು. ಹೀಗಾಗಿ ಅವರನ್ನು ಅಮಾನತುಗೊಳಿಸಿ ಮೇಲಾಧಿಕಾರಿಗಳಿಗೆ ಆದೇಶ ಕಳುಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.