ಮಂಗಳೂರು, ಡಿ29(SS): ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿಯ ಸ್ಟೂಡೆಂಟ್ ಹೌಸ್ ಕಟ್ಟಡದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲುಕ್ಮಾನ್ ಮತ್ತು ಮೊಹಮ್ಮದ್ ಅಕ್ಬರ್ (22) ಬಂಧಿತ ಆರೋಪಿಗಳು.
ನಗರದ ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿಯಿರುವ ಸಹಾಲ್ ಸ್ಟೂಡೆಂಟ್ ಹೌಸ್ ಎಂಬಲ್ಲಿ ಲೆನಿನ್ ಮತ್ತು ಅವರ ಸ್ನೇಹಿತ ವಿಷ್ಣು ಪ್ರಕಾಶ್ ಅವರು ಇದ್ದಾಗ ಆರೋಪಿಗಳಾದ ಲುಕ್ಮಾನ್, ಅಕ್ಬರ್ ಮತ್ತು ಇತರ ಇಬ್ಬರು ಯುವಕರು ಕೋಣೆಯ ಒಳಗಡೆ ನುಗ್ಗಿದ್ದಾರೆ. ಬಳಿಕ ಲೆನಿನ್ ಮತ್ತು ವಿಷ್ಣು ಪ್ರಕಾಶ್ ಅವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ರೂ. 8000/- ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ ಸಿಮ್ ಕಳವು ಮಾಡಿದ್ದಾರೆ. ಮಾತ್ರವಲ್ಲ,ವಿಷ್ಣು ಪ್ರಕಾಶ್ ಅವರ ರೂ. 10000/- ಮೌಲ್ಯದ ಮೊಬೈಲ್ ಮತ್ತು ಮೊಬೈಲ್ ಸಿಮ್ ಕಾರ್ಡ್ ಕಸಿದುಕೊಂಡು ಹೋಗಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ನಡೆಸಿ ಮೊಬೈಲ್ ಫೋನ್ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.