ಉಡುಪಿ, ಏ 19 (DaijiworldNews/DB): ಹದಿನಾಲ್ಕು ವರ್ಷಗಳ ಹಿಂದೆ ಮನೆ ಹಾಗೂ ಅಂಗಡಿಯಲ್ಲಿ ಚಿನ್ನಾಭರಣ, ನಗದು ಮತ್ತು ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಉಡುಪಿ ತಾಲೂಕು ನಾಲ್ಕೂರು ಗ್ರಾಮದ ಮುದ್ದೂರಿನ ಬಾಲಕೃಷ್ಣ ವೈದ್ಯ ಎಂಬವರ ಮನೆ ಮತ್ತು ಅಂಗಡಿಗೆ 2008 ಡಿಸೆಂಬರ್ 8ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾಲ್ವರು ಆಗಂತುಕರು ಪ್ರವೇಶಿಸಿ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿ ಮನೆಯಲ್ಲಿದ್ದ ಮೂವರನ್ನು ಕಟ್ಟಿ ಹಾಕಿ15000 ರೂ. ನಗದು, 71 ಪವನ್ ಚಿನ್ನ ಮತ್ತು 5 ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉಡುಪಿಯ ಮಾರಾಳಿ ಗ್ರಾಮದ ಉಮಾನಾಥ ಶೆಟ್ಟಿ, ಬೆಂಗಳೂರಿನ ಮಾರತ್ ಹಳ್ಳಿಯ ಶ್ರೀಧರ್ ಆಲಿಯಾಸ್ ಪ್ರಕಾಶ್, ಹಾಸನದ ಸುನೀಲ್ ಕುಮಾರ್ ಹಾಗೂ ಮಂಗಳೂರು ಕಂದಾವರ ಗ್ರಾಮದ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ಅವರನ್ನು ಬಂಧಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಾದ ಉಮಾನಾಥ ಶೆಟ್ಟಿ, ಸುನೀಲ್ ಕುಮಾರ್ ಹಾಗೂ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ಅವರಿಗೆ 3 ವರ್ಷ 6 ತಿಂಗಳು ಕಾರಾಗೃಹ ವಾಸ ಶಿಕ್ಷೆ ಹಾಗೂ 10500 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರಿನಾಥ ಮತ್ತು ಜಯಂತಿ ಕೆ. ವಾದ ಮಂಡಿಸಿದ್ದರು.