ಬೆಂಗಳೂರು, ಡಿ29(SS): ಎಚ್1 ಎನ್ 1 ಸೋಂಕಿನಿಂದ ಮೃತಪಟ್ಟ ರಾಜ್ಯದ ಖಡಕ್ ಐಪಿಎಸ್ ಅಧಿಕಾರಿ ಡಿಐಜಿ ಮಧುಕರ್ ಶೆಟ್ಟಿ ಅವರ ಹೈದರಾಬಾದ್ನ ನಿವಾಸದಲ್ಲಿ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಧುಕರ್ ಶೆಟ್ಟಿಯ ಸಹೋದ್ಯೋಗಿಯೊಬ್ಬರು ಅಗಲಿದ ಮಿತ್ರನಿಗೆ ಭಾವ ತುಂಬಿದ ಹಾಡಿನ ಮೂಲಕ ಕಣ್ಣೀರ ವಿದಾಯ ಮಾಡಿದರು. ಬಾಲಿವುಡ್ನ ಸಫರ್ ಚಿತ್ರದ ಜಿಂದಗಿ ಕೋ ಬಹುತ್ ಪ್ಯಾರ್ ಹಮ್ನೆ ಕಿಯಾ, ಮೌತ್ ಸೆ ಭೀ ಮೊಹಬ್ಬತ್ ನಿಭಾಯೆಂಗೆ ಹಮ್, ರೋತೆ ರೋತೇ ಜಮಾನೆ ಮೇ ಆಯೆ ಮಗರ್, ಹಸ್ತೇ ಹಸ್ತೇ ಜಮಾನೆ ಸೆ ಜಾಯೆಂಗೆ ಹಮ್ ಎಂದು ಹಾಡುತ್ತಾ ಭಾವುಕರಾದರು.
ಬೆಂಗಳೂರಿನ ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 8.30ರ ಬಳಿಕ ಪಾರ್ಥಿವ ಶರೀರವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ರಸ್ತೆ ಮಾರ್ಗವಾಗಿ ಉಡುಪಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಉಡುಪಿಯಲ್ಲಿ ಅಂತಿಮ ದರ್ಶನದ ಬಳಿಕ ಕುಂದಾಪುರ ತಾಲೂಕಿನಲ್ಲಿರುವ ಯಡಾಡಿ ಫಾರ್ಮ ಹೌಸ್ನಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.ಮಧುಕರ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು, ದಿಟ್ಟ ಅಧಿಕಾರಿಯನ್ನು ನೆನೆದು ಅವರ ಅಭಿಮಾನಿಗಳೂ ಕಣ್ಣೀರಾಗಿದ್ದಾರೆ.