ಸುಳ್ಯ, ಏ 19 (DaijiworldNews/DB): ಮನೆಯೊಳಗೆ ನುಗ್ಗಿ ಮೊಬೈಲ್ ಮತ್ತು ಹಣ ಎಗರಿಸಿದ್ದ ಕಳ್ಳನನ್ನು ಊರವರೇ ಬೆನ್ನತ್ತಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸುಳ್ಯದ ಜಟ್ಟಿಪಳ್ಳದಲ್ಲಿ ನಡೆದಿದೆ.
ಜಟ್ಟಿಪಳ್ಳದ ದಿ. ಬಲ್ಲು ಎಂಬವರ ಮನೆಗೆ ಏಪ್ರಿಲ್ 17ರ 12.30 ತಡರಾತ್ರಿ ನುಗ್ಗಿದ ಕಳ್ಳ ಬಲ್ಲು ಅವರ ಸೊಸೆಯ ಮೊಬೈಲ್ ಮತ್ತು ನಗದನ್ನು ಕದ್ದು ಪರಾರಿಯಾಗಿದ್ದ. ಈ ವೇಳೆ ಕಳ್ಳ ಕದ್ದೋಡಿದ ವಿಚಾರ ಗೊತ್ತಾಗಿ ಆಕೆ ಬೊಬ್ಬೆ ಹೊಡೆದಿದ್ದಾರೆ. ಇದರಿಂದ ಮನೆಯವರು ಮತ್ತು ಅಕ್ಕಪಕ್ಕದ ಮನೆಯವರು ಎಚ್ಚರಗೊಂಡು ಹುಡುಕಾಡಿದರೂ ಕಳ್ಳ ಪತ್ತೆಯಾಗಿರಲಿಲ್ಲ.
ಬಳಿಕ ಶಾಲಾ ಬಳಿಯ ಅಂಗಡಿಯೊಂದರಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಯುವಕನೋರ್ವ ನಡೆದುಕೊಂಡು ಹೋಗಿರುವುದು ಮತ್ತು ಹಿಂತಿರುಗುವಾಗ ಓಡಿಕೊಂಡು ಬಂದಿರುವುದು ತಿಳಿದು ಬಂದಿದೆ. ಆನಂತರ ಹುಸೈನ್ ಎಂಬವರು ಹಾಲಿನ ಲೈನ್ಗಾಗಿ ಪೇಟೆಗೆ ಬಂದಾಗ ಕಳ್ಳ ಪತ್ತೆಯಾಗಿದ್ದು, ಇತರರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಇತರ ಯುವಕರೂ ಸೇರಿ ಕಳ್ಳನನ್ನು ಹಿಡಿದು ಕಳವು ಮಾಡಿದ್ದ ಮನೆಗೆ ಕರೆದೊಯ್ದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಆತ ಒಪ್ಪಿಕೊಂಡು ಮೊಬೈಲ್ ಮತ್ತು ನಗದನ್ನು ಹಿಂತಿರುಗಿಸಿದ್ದಾನೆ.
ಕಳ್ಳತನ ಮಾಡಿದಾತ ಕೊಪ್ಪಳದ ಶರಣಪ್ಪ ಎಂದು ಹೆಸರು ಹೇಳಿಕೊಂಡಿದ್ದು, ಸುಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ಸದ್ಯ ಆತನನ್ನು ಸುಳ್ಯ ಪೊಲೀಸರ ವಶಕ್ಕೆ ನೀಡಲಾಗಿದೆ.