ಉಡುಪಿ, ಏ 19 (DaijiworldNews/HR): ದಿಂಗಾಲೇಶ್ವರ ಸ್ವಾಮೀಜಿಗಳು ಯಾವ ಕಾಮಗಾರಿಗೆ, ಯಾರಿಗೆ ಕಮಿಷನ್ ಕೊಟ್ಟಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟ ಪಡಿಸಲಿ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಠಗಳಿಗೆ ಅನುದಾನ ಬಿಡುಗಡೆಗೂ ಶೇ. 30ರಷ್ಟು ಕಮಿಷನ್ ನೀಡಬೇಕು ಎಂದು ಗಂಭೀರ ಆರೋಪವನ್ನು ದಿಂಗಾಲೇಶ್ವರ ಸ್ವಾಮೀಜಿಗಳು ಮಾಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, ಒಂದು ನಿರ್ದಿಷ್ಟ ಪ್ರಕರಣಗಳು ಯಾವುದಾದರೂ ಇದ್ದಲ್ಲಿ ಈ ಹಿಂದೆ ನಾನು ನಿರ್ವಹಿಸಿದ ಮತ್ತು ಈಗ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಕಂಡು ಬಂದಲ್ಲಿ ಬಹಿರಂಗವಾಗಿ ಹೇಳಲಿ. ಆ ಇಲಾಖೆಯ ಅಧಿಕಾರಿಗಳು ಮತ್ತು ನನ್ನನು ಸೇರಿದಂತೆ ತನಿಖೆಗೆ ಒಳಪಡಿಸಲಿ. ನಾನು ಸಿದ್ದನಿದ್ದೇನೆ ಎಂದರು.
ಎಪ್ರಿಲ್ ಮೊದಲ ವಾರದಲ್ಲಿ 65ಮಠಗಳಿಗೆ ಒಟ್ಟು ರೂ 119 ಕೋಟಿ ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಒಂದು ರೂಪಾಯಿ ಬಿಡುಗಡೆ ಆಗಿಲ್ಲ. ಯಾವುದೇ ಅನುದಾನ ದೇವಸ್ಥಾನಕ್ಕೆ ನೇರವಾಗಿ ಹೋಗಲ್ಲ. ದೇವಸ್ಥಾನದ ಇತರ ಅಭಿವೃದ್ಧಿ ಕೆಲಸಕ್ಕೂ ಬಳಕೆಯಾಗುತ್ತದೆ. ಸರಿಯಾದ ದಾಖಲೆ ಕೊಡದಿದ್ದಲ್ಲಿ ಅನುದಾನ ಸಿಗಲ್ಲ. ಸಂಬಂಧ ಪಟ್ಟ ಇಲಾಖೆ ಅಧ್ಯಯನ ಮಾಡಿ ಡಿಪಿಆರ್ ಮಾಡಿದ ಮೇಲೆ, ಸರಿಯಾದ ದಾಖಲೆ ಪರಿಶೀಲನೆ ಮಾಡಿದ ಮೇಲೆ ಹಣ ಬಿಡುಗಡೆ ಆಗುತ್ತದೆ ಎಂದಿದ್ದಾರೆ.
ಇನ್ನು ದಿಂಗಲೇಶ್ವರ ಸ್ವಾಮಿಜಿ ಯಾವ ಕಾಮಗಾರಿಗೆ, ಯಾರಿಗೆ ಕಮಿಷನ್ ಕೊಟ್ಟಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟ ಪಡಿಸಲಿ. ಆರೋಪ ಸತ್ಯವಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ. ಈ ನನ್ನ ಪ್ರತಿಕ್ರಿಯೆ ಕೇವಲ ಸ್ವಾಮಿಜಿ ಗಲ್ಲ ಜನಸಾಮಾನ್ಯನಿಗೂ ಅನ್ವಯ ಆಗುತ್ತದೆ. ಮುಖ್ಯವಾಗಿ ಸಾಧು-ಸಂತರ ಮಾತಿಗೆ ಉತ್ತರ ಕೊಡಬಾರದು ಅಂತ ಇದೆ. ನಮ್ಮ ಬಿಜೆಪಿ ಸರಕಾರ ಪುಂಡರು ಪೋಕರಿಗಳಿಗೆ ಕಡಿವಾಣ ಹಾಕಿದೆ ಎಂದು ಹೇಳಿದ್ದಾರೆ.