ಬಂಟ್ವಾಳ, ಏ 19 (DaijiworldNews/MS): ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಪಡ್ಪು ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಸೂರಿಕುಮೇರು ಪಡ್ಪು ನಿವಾಸಿ, ಕೆಎಸ್ಆರ್ಟಿಸಿ ಸಿಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ದನ ಮೂಲ್ಯ ಪಿ. (54) ಎಂದು ಗುರುತಿಸಲಾಗಿದೆ.
ಮಂಗಳೂರು ಕೆಎಸ್ಆರ್ಟಿಸಿ ಡಿಪೋದಲ್ಲಿ ಟಿಸಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆದರೆ ಮರುದಿನ ಏ18ರಂದು ಕರ್ತವ್ಯಕ್ಕೆ ತೆರಳದೆ ಮನೆಯಲ್ಲೇ ಇದ್ದ ಅವರು ಮಧ್ಯಾಹ್ನದ ವೇಳೆ ಯಾವುದೋ ವಿಷ ಪದಾರ್ಥ ಸೇವಿಸಿ ಮನೆ ಹತ್ತಿರದ ಬಾವಿಗೆ ಹಾರಿದ್ದಾರೆ.
ಇದನ್ನು ಕಂಡ ಪತ್ನಿ, ಹಾಗೂ ಪುತ್ರ ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಏ.19 ರಂದು ಮೃತಪಟ್ಟಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821