ಮಲ್ಪೆ, ಏ 19 (DaijiworldNews/DB): ಮಲ್ಪೆಯ ಆಳಸಮುದ್ರ ಮೀನುಗಾರಿಕಾ ಬೋಟೊಂದು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆಗೊಂಡಿದೆ. ಅದೃಷ್ಟವಶಾತ್ ಬೋಟ್ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರು ರಕ್ಷಣೆ ಪಡೆಯಲ್ಪಟ್ಟು ಸುರಕ್ಷಿತವಾಗಿ ದಡಕ್ಕೆ ತೆರಳಿದ್ದಾರೆ. ಆದರೆ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಡೀಸೆಲ್, ಮೀನು ಮತ್ತು ಇತರ ಪರಿಕರಗಳು ನೀರು ಪಾಲಾಗಿವೆ. ಬೋಟ್ ಮುಳುಗಡೆಯಿಂದ ಮಾಲಕರಿಗೆ ಸುಮಾರು 70 ಲಕ್ಷ ರೂ. ನಷ್ಟಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಡೆಕಾರು ಪಡುಕರೆ ಭಗವಾನ್ದಾಸ್ ಕೋಟ್ಯಾನ್ ಅವರಿಗೆ ಸೇರಿದ ದಿವ್ಯಶಕ್ತಿ ಆಳ ಸಮುದ್ರ ಬೋಟ್ ಮಲ್ಪೆಯ ಬಂದರಿನಿಂದ ಎ. 10ರಂದು ಆಳಸಮುದ್ರ ಮೀನುಗಾರಿಕೆಗೆಂದು ತೆರಳಿತ್ತು. ಎ. 13ರಂದು ರಾತ್ರಿ 9.30ರ ವೇಳೆಗೆ ರತ್ನಗಿರಿಯ ಬಳಿ ಬೋಟ್ನಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಈ ವೇಳೆ ಬೋಟ್ನ ಅಡಿಭಾಗಕ್ಕೆ ಗಟ್ಟಿಯಾದ ವಸ್ತುವೊಂದು ತಾಗಿದ ಪರಿಣಾಮ ನೀರು ಬೋಟ್ನೊಳಗೆ ಬರಲಾರಂಭಿಸಿತು. ತತ್ಕ್ಷಣ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ನೀಲಾದ್ರಿ ಮತ್ತು ಸುವರ್ಣ ಛಾಯ ಬೋಟ್ನವರಿಗೆ ದಿವ್ಯಶಕ್ತಿ ಬೋಟ್ನಲ್ಲಿದ್ದವರು ಮಾಹಿತಿ ನೀಡಿದರು. ಮಾಹಿತಿ ಪಡೆದ ಕೂಡಲೇ ಎರಡೂ ಬೋಟ್ನವರು ಬಂದು ದಿವ್ಯಶಕ್ತಿ ಬೋಟ್ನಲ್ಲಿದ್ದವರನ್ನು ರಕ್ಷಿಸಿದ್ದಾರೆ.