ಉಡುಪಿ, ಏ 19 (DaijiworldNews/MS): ಮಠಗಳಿಗೆ ಬರುವ ಅನುದಾನದಲ್ಲಿ ಕೂಡಾ ೩೦% ಕಮಿಷನ್ ಪಡೆಯಲಾಗುತ್ತದೆ ಎನ್ನುವ ದಿಂಗಾಲೇಶ್ವರ ಶ್ರೀಗಳ ಆರೋಪಕ್ಕೆ ಇದೀಗ ಕರಾವಳಿಯ ಸ್ವಾಮೀಜಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ದಿಂಗಾಲೇಶ್ವರ ಶ್ರೀಗಳಿಗೆ ಪ್ರತಿಕ್ರಿಯೆ ನೀಡಿರುವ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರು "ಇದೊಂದು ಅನಗತ್ಯ ಆರೋಪ. ದಿಂಗಾಲೇಶ್ವರ ಶ್ರೀಗಳ ಆರೋಪ ಅಪ್ಪಟ ಸುಳ್ಳು. ನಮ್ಮ ಮಠಕ್ಕೆ ಕೂಡಾ ಸರಕಾರದಿಂದ ಸುಮಾರು 50 ಲಕ್ಷ ರೂಪಾಯಿ ಅನುದಾನ ಬಂದಿದೆ. ಇದೇ ರೀತಿ ನಮ್ಮ ಹತ್ತಿರದ ಇತರ ಮಠಗಳಿಗೂ ಅನುದಾನ ಬಂದಿದೆ. ನಾವ್ಯಾರೂ ಒಂದು ರೂಪಾಯಿ ಕಮಿಷನ್ ಯಾವುದೇ ಹಂತದಲ್ಲಿ ಸರಕಾರದ ಅಧಿಕಾರಿಗಳಿಗೆ ನೀಡಿಲ್ಲ. ಎಲ್ಲೋ ಆದ ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ ಇದಕ್ಕೆ ಸೂಕ್ತ ದಾಖಲೆಯನ್ನು ನೀಡಬೇಕು" ಎಂದು ತಿರುಗೇಟು ನೀಡಿದ್ದಾರೆ.
ಇನ್ನು ದಿಂಗಾಲೇಶ್ವರ ಸ್ವಾಮೀಜಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಪಲಿಮಾರು ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿಯವರು "ನಮ್ಮ ದೇಶದಲ್ಲಿ ದೇವಾಲಯಗಳ ಸಂಪಾದನೆ ಅಲ್ಪ ಏನೂ ಇಲ್ಲ, ದೇವಸ್ಥಾನದಲ್ಲಿ ಬಂದ ಸಂಪತ್ತನ್ನು ಇತರ ಬಡ ದೇವಸ್ಥಾನಗಳಿಗೆ ಮುಟ್ಟಿಸುವಂತಹದ್ದು ಸಹಜ.ಕೆಲವೊಂದು ಸಂದರ್ಭದಲ್ಲಿ ಹಿಂದಿನ ಅಧಿಕಾರದಲ್ಲಿ ಅದು ಎಲ್ಲೆಲ್ಲಿಗೋ ಹೋಗುತಿತ್ತು. ಇವತ್ತಿನ ಸರಕಾರ ದೇವಾಲಯದ ಸಂಪತ್ತು ದೇವಾಲಯ, ಮಠ ಮಂದಿರಗಳಿಗೆ ಮುಟ್ಟಿಸಬೇಕು ಎಂದು ತುಂಬಾ ಕಾಳಜಿ ವಹಿಸುತ್ತಿದೆ. ಇದು ಅಭಿನಂದನೀಯ. ಇಂತಹ ನೂರಾರೂ ಯೋಜನೆಗಳಲ್ಲಿ ಕರಾವಳಿ ಮಠ ಮಂದಿರಗಳಿಗೂ ಹಿಂದಿನ ಮುಖ್ಯಮಂತ್ರಿ ಗಳಾಗಿದ್ದ ಯಡಿಯೂರಪ್ಪ ಮತ್ತು ಈಗಿನ ಸರಕಾರ ಕೂಡಾ ಸಾಕಷ್ಟು ಸಹಾಯವನ್ನು ನೀಡುತ್ತಾ ಇದ್ದಾರೆ. ಯಡಿಯೂರಪ್ಪ ನವರು ಪಲಿಮಾರು ಮಠಕ್ಕೂ ಧನಸಹಾಯ ಘೋಷಣೆ ಮಾಡಿದ್ದರು. ಆದರೆ ಆ ದುಡ್ಡನ್ನು ಕೊಡುವಾಗ ಯಾರೂ ಕೂಡಾ ಫಲಾಫೇಕ್ಷೆಯನ್ನು ಪಡೆದಿಲ್ಲ. ಶಾಸಕ, ಮಂತ್ರಿಗಳು ಕಿಂಚಿತ್ತೂ ಸ್ವಾರ್ಥ ತೋರಿಸಿಲ್ಲ. ಮದ್ಯದಲ್ಲಿ ತೊಡಕಾದಾಗ ಶಾಸಕರು ಮತ್ತು ಮುಜರಾಯಿ ಮಂತ್ರಿಗಳು ಅನುಕೂಲ ಕಲ್ಪಿಸಿದ್ದಾರೆ. ಸ್ವಲ್ಪ ಕಾಲವಿಳಂಬ ಆಗಿರಬಹುದು ಆದರೆ ಅದಕ್ಕೆ ಯಾವುದೇ ಶಾಸಕ, ಮಂತ್ರಿ ಹೊಣೆಗಾರರಲ್ಲ. ಪ್ರಾಮಾಣಿಕವಾಗಿ ಶಾಸಕ, ಮಂತ್ರಿಗಳು ಸದ್ವಿನಿಯೋಗ ಮಾಡುತಿದ್ದಾರೆ. ಕಷ್ಟದಲ್ಲಿರುವ ದೇವಾಲಯಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತಾ ಇದ್ದಾರೆ. ಹೀಗೆ ನೀಡುವಾಗ ಯಾವುದೇ ಲಂಚ, ಆಮಿಷಕ್ಕೆ ಅವಕಾಶ ಇಲ್ಲ ಎಂಬುವುದನ್ನು ನಾನು ಅಭಿಮಾನದಿಂದ ಹೇಳಬಯಸುತ್ತೇನೆ. ಯಾರದ್ದೊ ಅಪಸ್ವರ ಬರುತ್ತಿದೆ. ಪ್ರಾಯಶಂ ಅದು ಅವರ ಸ್ವಂತ ಇಲ್ಲದೆ ಇರಬಹುದು. ಪ್ರಾಮಾಣಿಕವಾದ ಈ ಸೇವೆಯನ್ನು ಜನ ಗುರುತಿಸಿ, ಗಮನಿಸಬೇಕು. ಇದರಲ್ಲಿ ಹುಳಿ ಹಿಂಡುವ ಕೆಲಸ ಮಾಡಬಾರದು. ಇಂತಹ ಸರಕಾರಗಳಿಗೆ ಪ್ರೋತ್ಸಾಹ ಕೊಡಬೇಕು. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುವುದು ಬಹಳ ಕಷ್ಟದ ಕಾರ್ಯ. ಇದು ಅಭಿನಂದನೀಯ. ಯಾವುದೇ ರೀತಿಯ ಹುಳುಕಿಗೆ ಇಲ್ಲ ಖಂಡಿತಾ ಅವಕಾಶ ಇಲ್ಲ" ಎಂದಿದ್ದಾರೆ.