ಉಡುಪಿ, ಏ 18 (DaijiworldNews/SM) : ಸತತ ಒಂದು ವಾರದಿಂದ ಕೋವಿಡ್-19 ಮುಕ್ತ ಉಡುಪಿ ಜಿಲ್ಲೆಯಾಗಿ ಹೊರ ಹೊಮ್ಮಿದೆ. ಎ. 12ರಂದು ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಯಾವುದೇ ವ್ಯಕ್ತಿಗಳು ಪತ್ತೆಯಾಗಿಲ್ಲ. ಉಡುಪಿ ಜಿಲ್ಲೆ ಸತತ ಏಳು ದಿನಗಳಿಂದ ಕೋವಿಡ್ ಮುಕ್ತವಾಗಿದೆ.
ಆದರೆ, ಉಡುಪಿ ಜಿಲ್ಲೆಯನ್ನು ಕೋವಿಡ್-19 ಮುಕ್ತ ಎಂದು ಘೋಷಿಸುವ ಮುನ್ನ ಇನ್ನೂ ಕೂಡಾ ಸ್ವಲ್ಪ ದಿನ ಕಾದು ನೋಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ. ಸದ್ಯ, ಭಾರತದ ಕೆಲವು ಕಡೆಗಳಲ್ಲಿ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೋವಿಡ್-19 ಮುಕ್ತ ಜಿಲ್ಲೆಯೆಂದು ಘೋಷಿಸದೇ ಇರುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಪ್ರತೀದಿನ ಕೋವಿಡ್ ಪರೀಕ್ಷೆಗಳು ನಡೆಯುತ್ತಿರುವುದರಿಂದ ಯಾವುದೇ ಕ್ಷಣದಲ್ಲೂ ಪಾಸಿಟಿವ್ ಪ್ರಕರಣ ಪತ್ತೆಯಾಗಬಹುದು. ಅಲ್ಲದೆ, ಜಿಲ್ಲೆಯ ಜನರು ದೇಶ-ವಿದೇಶಗಳಿಗೆ ಪ್ರಯಾಣಿಸುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದರು.
ಏ. 18ರಂದು ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆಗೊಳಗಾದ 67 ಮಂದಿಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಏಕೈಕ್ ವ್ಯಕ್ತಿಯೂ ಎ. 11ರಂದು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಉಡುಪಿ ಕೋವಿಡ್ ಮುಕ್ತ ಜಿಲ್ಲೆಯಾಗಿತ್ತು. ಎ. 18ರಂದು ಉಡುಪಿನ ತಾಲೂಕಿನ 55, ಕುಂದಾಪುರದ 8 ಹಾಗೂ ಕಾರ್ಕಳ ತಾಲೂಕಿನ 4 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ, ಯಾರಲ್ಲೂ ಕೋವಿಡ್ ಸೋಂಕು ಪತ್ತೆಯಾಗಿಲ್ಲ ಎಂದು ಉಡುಪಿ ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ.