ಮಂಗಳೂರು, ಏ 18 (DaijiworldNews/SM): ಪ್ರಥಮ ಬಾರಿಗೆ ರಿವರ್ ಫೆಸ್ಟ್ ನಡೆಸಿದ ಪ್ರದೇಶವಾದ ಬಂಗ್ರಕೂಳೂರಿನ ಪ್ರಕೃತಿಯ ಮಡಿಲಿನ ರಮಣೀಯ ಸ್ಥಳವಿಂದು ಅನೈತಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿ ಬದಲಾಗಿದ್ದು, ಸ್ಥಳೀಯರನ್ನು ಕೆರಳಿಸಿದೆ. ಪ್ರವಾಸಿಗರನ್ನು ಪ್ರಕೃತಿಯೇ ತನ್ನತ್ತ ಸೆಳೆಯುವಂತಹ ಸೌಂದರ್ಯ ಅಲ್ಲಿ ತುಂಬಿದ್ದ ಜಾಗವನ್ನು ಪ್ರವಾಸಿ ತಾಣವಾಗಿ ಬದಲಾಗಿಸುವ ವಿಫುಲ ಅವಕಾಶವಿದ್ದರೂ ಸಂಬಂಧಪಟ್ಟ ಇಲಾಖೆಗಳು ಕೈ ಕಟ್ಟಿ ಕುಳಿತಿದೆ. ನಾಗರಿಕ ಸಮಾಜದ ಬೇಜವಬ್ದಾರಿತನ ಹಾಗೂ ಆಡಳಿತ ವರ್ಗದ ನಿರ್ಲಕ್ಷ್ಯತನಕ್ಕೆ ಪ್ರಕೃತಿಯ ಮಡಿಲು ಹೇಗೆ ಬಲಿಯಾಗುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನವಾಗಿದೆ. ಅದರಲ್ಲೂ, ವಿದ್ಯೆ ಸಂಪಾದಿಸುವ ವಿದ್ಯಾರ್ಥಿ ಸಮುದಾಯವೇ ದಾರಿ ತಪ್ಪುವುದಕ್ಕೂ ಇದೊಂದು ಉದಾಹರಣೆಯಾಗಿದೆ.
ಮಂಗಳೂರಿನ ಕೂಳೂರಿನಿಂದ ಒಂದೆರಡು ಕಿ.ಮೀ. ಫಲ್ಗುಣಿ ನದಿ ದಂಡೆಯ ಮಣ್ಣಿನ ರಸ್ತೆಯಲ್ಲಿ ಸಂಚರಿಸಿದರೆ ಈ ಹಿಂದೆ ದ.ಕ. ಜಿಲ್ಲಾಡಳಿತ ರಿವರ್ ಫೆಸ್ಟ್ ನಡೆಸಿದ ಪ್ರಕೃತಿ ರಮಣೀಯವಾದ ಸ್ಥಳ ನಮಗೆ ಸಿಗುತ್ತಿತ್ತು. ಆದರೆ, ಇದೀಗ ಆ ಸ್ಥಳದ ಚಿತ್ರಣವೇ ಬದಲಾಗಿದೆ. ಈ ಸ್ಥಳ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಯಾವುದೇ ಯೋಜನೆಗೆ ಸದ್ಯ ಮೀಸಲಿರಿಸಲಾಗಿಲ್ಲ. ಈ ಹಿಂದೆ ನದಿಯಲ್ಲಿ ಡ್ರಜ್ಜಿಂಗ್ ಮಾಡಿದ ಸಂದರ್ಭ ಮರಳು ರಾಶಿ ಹಾಕಲು ಈ ಸ್ಥಳ ಬಳಕೆ ಮಾಡಲಾಗಿತ್ತು. ಇದೀಗ ಅಘೋಷಿತವಾಗಿ ಯುವ ಸಮೂಹಕ್ಕೆ ಮೋಜಿನ ಕೇಂದ್ರವಾಗಿ ಬದಲಾಗಿದೆ. ಅನೈತಿಕ ಚಟುವಟಿಕೆ ಎಗ್ಗಿಲ್ಲದೆ ನಡೆಯುವುದರ ಜೊತೆಗೆ ಮಾದಕ ದ್ರವ್ಯ ಬಳಕೆಯ ಕೇಂದ್ರವಾಗಿಯೂ ಮಾರ್ಪಾಡಾಗುತ್ತಿದೆ. ಈ ಪ್ರದೇಶದಲ್ಲಿ ಕಣ್ಣಾಯಿಸಿದರೆ ಪೊದೆಗಳ ಮಧ್ಯೆ ಮೋಜಿನಲ್ಲಿ ತೊಡಗಿರುವ ಯುವ ಜೋಡಿಗಳು, ಕುಡಿದ ಬಾಟಲಿ, ಸೀಸೆಗಳನ್ನು ಹಾಗೂ ತಿಂದ ಆಹಾರದ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ವಿದ್ಯಾವಂತ ಅನಾಗರಿಕರು ನಮಗೆ ಕಾಣಸಿಗುತ್ತಾರೆ. ಕಾಲೇಜು ಯೂನಿಫಾರಂನಲ್ಲೇ ಬಂದು ಮೋಜು ಮಸ್ತಿನಲ್ಲಿ ತೊಡಗುವ ಯುವ ಸಮೂಹದ ನಡವಳಿಕೆಯಿಂದ ಸ್ಥಳೀಯ ಜನರು ಮುಜುಗರ ಪಡುವಂತಾಗಿದೆ.
ರಿವರ್ ಫೆಸ್ಟ್ ಮೂಲಕ ಜನಮನ ಸೆಳೆದಿದ್ದ ಈ ಜಾಗವಿಂದು ಇಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಎಂದರೆ ಅದಕ್ಕೆ ಆಡಳಿತ ವರ್ಗದ ಬೇಜವಬ್ದಾರಿ ಎನ್ನಲೇಬೇಕು. ಸರಕಾರ ಈ ಸ್ಥಳದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಇದು ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗುವ ಅವಕಾಶವಿದೆ. ಆದರೆ, ಸದ್ಯ ಇದನ್ನು ಮೋಜಿನ ಪಾರ್ಟಿಗಾಗಿ ಮೀಸಲಿರಿಸಿದಂತೆ ಕಾಣುತ್ತಿದೆ. ಪರಿಣಾಮ ಇಲ್ಲಿ ಬಿಯರ್, ವಿಸ್ಕಿ ಹೀಗೆ ವಿವಿಧ ಮದ್ಯದ ಬಾಟಲಿ, ತಿಂದು ಬಿಸಾಡಿದ ಪೊಟ್ಟಣಗಳು, ಪ್ಲಾಸ್ಟಿಕ್ ರ್ಯಾಪರ್ಗಳ ರಾಶಿಯಿದೆ. ನದಿಗೆ ನೀರಿಗೂ ತ್ಯಾಜ್ಯಗಳನ್ನು ಎಸೆದು ವಿಕೃತಿ ಮೆರೆಯುತ್ತಿದ್ದಾರೆ ಇಲ್ಲಿ...! ಅಷ್ಟೇ ಅಲ್ಲದೆ, ಇಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಾದೊಡನೆ ಅಪಾಯವನ್ನು ತಂದೊಡ್ಡುವ ಮುನ್ಸೂಚನೆಯೂ ಇದೆ. ಯುವ ಸಮೂಹದ ದುರ್ವರ್ತನೆಯನ್ನು ಸಂಬಂಧಪಟ್ಟ ಇಲಾಖೆಗಳು ನಿಯಂತ್ರಿಸುವುದು ಅನಿವಾರ್ಯವಾಗಿದೆ. ನದಿ ದಂಡೆಯ ಉದ್ದಕ್ಕೂ ತ್ಯಾಜ್ಯ ಹಾಕುವ, ನದಿ ಒಡಲಿಗೆ ಮಣ್ಣು ಹಾಕುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ನದಿ ದಂಡೆ ಉದ್ದಕ್ಕೂ ತಂತಿ ಬೇಲಿ ನಿರ್ಮಿಸಿದ್ದು, ಯಶಸ್ವಿಯಾಗಿದೆ. ಇದೇ ಮಾದರಿ ಕಂದಾಯ ಭೂಮಿಯ ಸುತ್ತಲೂ ತಂತಿ ಬೇಲಿ ಹಾಕಿ ಅಕ್ರಮ ಕೆಲಸಗಳಿಗೆ ತಡೆಯಬೇಕಿದೆ. ಕೂಳೂರು ಜಂಕ್ಷನ್ಗೆ ಹತ್ತಿರವಿದ್ದರೂ ಸುರಕ್ಷೆ ದೃಷ್ಟಿಯಿಂದ ಪೊಲೀಸ್ ಚೌಕಿಯನ್ನು ಸ್ಥಾಪಿಸಿದಲ್ಲಿ ಸ್ಥಳೀಯರಿಗೂ ಅನುಕೂಲವಾಗಲಿದೆ. ಸಮಾಜಕ್ಕೆ ಉತ್ತಮ ಭವಿಷ್ಯ ನೀಡಬೇಕಾದ ವಿದ್ಯಾವಂತ ಯುವ ಸಮೂಹವೇ ಈ ರೀತಿಯಲ್ಲಿ ಬದಲಾಗುತ್ತಿರುವುದು ಖೇದಕರವಾಗಿದೆ. ಒಟ್ಟಿನಲ್ಲಿ, ಬಂಗ್ರಕೂಳೂರಿನ ಈ ಅನೈತಿಕ ಚಟುವಟಿಕಾ ತಾಣಕ್ಕೆ ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಶೀಘ್ರದಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಂತ್ರಿಸಲಿ. ಪ್ರಕೃತಿಯ ಈ ಸುಂದರ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಿ ಸ್ಥಳೀಯ ಮತ್ತು ಮಂಗಳೂರಿನ ಜನತೆಗೆ ಒದಗಿಸಲಿ...