ಕೊಲ್ಲೂರು, ಏ 18 (DaijiworldNews/MS): ಕೇಂದ್ರ ಸರ್ಕಾರ ನೂತನವಾಗಿ ಪ್ರಾರಂಭಿಸಿರುವ "ಭೋಗ್ " ಅಡಿಯಲ್ಲಿ ಆಹಾರ ಸುರಕ್ಷಾ ಮತ್ತು ಗುಣಮಟ್ಟದ ಪ್ರಾಧಿಕಾರವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ ಅರ್ಪಿಸುವ ನೈವೇಧ್ಯ ಮತ್ತು ಭಕ್ತರಿಗೆ ನೀಡುವ ಪ್ರಸಾದ ರೂಪದ ಅನ್ನದಾಸೋಹ, 'ಗರಿಷ್ಟ ಗುಣಮಟ್ಟದಿಂದ ಕೂಡಿದೆ' ಎಂದು ಪ್ರಮಾಣ ಪತ್ರ ನೀಡಿದೆ.
ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ನಿತ್ಯವೂ ಸಾವಿರಾರೂ ಸಂಖ್ಯೆಯಲ್ಲಿ ರಾಜ್ಯ-ಹೊರ ರಾಜ್ಯ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರೂ ಆಗಮಿಸುತ್ತಾರೆ. ಹೀಗೆ ಲಕ್ಷಾಂತರ ಮಂದಿಯ ಶೃದ್ಧಾಕೇಂದ್ರವಾಗಿರುವ ದೇಗುಲದಲ್ಲಿ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಇದೆ.
ಈ ಭೋಜನ ಪ್ರಸಾದ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯಗಳು ಗರಿಷ್ಟ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾಗಿದೆ ಎಂದು ಪ್ರಾಧಿಕಾರವು ಪ್ರಮಾಣಪತ್ರವನ್ನು ನೀಡಿದೆ.
ಈ ಭೋಜನಾ ತಯಾರಿಸುವ ಅಡುಗೆ ಮನೆ, ಅಲ್ಲಿರುವ ಸೌಲಭಯಗಳು, ಆಹಾರ ತಯಾರಿಸುವ ವಿಧಾನ, ಈ ಸಂದರ್ಭದಲ್ಲಿ ಪಾಲಿಸುವ ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗೆ ನೀಡಿರುವ ತರಬೇತಿ ಇತ್ಯಾದಿ ಅಂಶಗಳನ್ನು ಆಧರಿಸಿ ಇತ್ತೀಚೆಗೆ ಪ್ರಾಧಿಕಾರವು ಖಾಸಗಿ ಎಜೆನ್ಸಿ ಮೂಲಕ ಆಡಿಟ್ ಮಾಡಲಾಗಿದ್ದು 2024ರವರೆಗೆ ಈ ಪ್ರಮಾಣಪತ್ರ ನೀಡಲಾಗಿದೆ.
ನೈರ್ಮಲ್ಯ, ವಾತಾವರಣ, ಸಂಗ್ರಹಣೆ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುವ ಶುದ್ಧ ನೀರು ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿ, ಎಫ್ಎಸ್ಎಸ್ಎಐ ಪ್ರಮಾಣಪತ್ರವನ್ನು ನೀಡಿದೆ ಎಂದು ಉಡುಪಿಯ ಎಫ್ಎಸ್ಎಸ್ಎಐ ನಿಯೋಜಿತ ಅಧಿಕಾರಿ ಡಾ.ಪ್ರೇಮಾನಂದ್ ಅವರು ಹೇಳಿದ್ದಾರೆ.