ಉಡುಪಿ/ಮಂಗಳೂರು, ಏ 17 (DaijiworldNews/HR): ಅವಳಿ ನಗರದ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಶುಕ್ರವಾರದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿತ್ತು.
ಅಂಬೇಡ್ಕರ್ ಜಯಂತಿಯ ನಿಮಿತ್ತ ನಾಲ್ಕು ದಿನ ನಿರಂತರ ರಜೆ ಇದ್ದ ಕಾರಣ ಶುಭ ಶುಕ್ರವಾರ(ಗುಡ್ ಪೈಡೆ), ಮೂರನೇ ಶನಿವಾರ ಮತ್ತು ಭಾನುವಾರದಂದು ಜನರು ವಿರಾಮಕ್ಕಾಗಿ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಕುಮಶಿ ಆನೆಗುಡ್ಡೆ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕಟೀಲು ಕ್ಷೇತ್ರಗಳಂತಹ ಗಣ್ಯ ಧಾರ್ಮಿಕ ಸ್ಥಳಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ.
ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಮಲ್ಪೆ, ಮರವಂತೆ, ಕಾಪು, ಸಸಿಹಿತ್ಲು, ಪಣಂಬೂರು ಮೊದಲಾದ ಕಡಲತೀರಗಳಲ್ಲಿ ಜನಸಾಗರವೇ ಹರಿದು ಬಂದಿದ್ದು, ಶನಿವಾರ ಮತ್ತು ಭಾನುವಾರ ಜನಸಾಗರವೇ ಹರಿದುಬಂದಿತ್ತು.
ಸರಣಿ ರಜೆ ಹಾಗೂ ವಿಷು ರಥೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಲವು ಭಕ್ತರು ಭೇಟಿ ನೀಡಿದ್ದರು. ಏಪ್ರಿಲ್ 13 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಜಾತ್ರೆ ನಡೆಯುತ್ತಿದ್ದು, ಏಪ್ರಿಲ್ 24 ರಂದು ರಥೋತ್ಸವ ನಡೆಯಲಿದೆ.