ಬೆಂಗಳೂರು, ಡಿ29(SS): ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಇಂಧನ ಸಚಿವೆಯಾಗಿದ್ದ ಸಂದರ್ಭದಲ್ಲಿ ಬರೋಬ್ಬರಿ 90 ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ನೀತಿ ಟ್ರಸ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿ, ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಸಂಸದೆ ಶೋಭಾ ಕರಂದ್ಲಾಜೆ ಇಂಧನ ಖಾತೆ ಸಚಿವೆ ಆಗಿದ್ದ ಸಮಯ ಅಂದರೆ 2012-13ನೇ ಸಾಲಿನಲ್ಲಿ ಬಂಜ್ ಕೇಬಲ್ ಕಾಮಗಾರಿಯಲ್ಲಿ ಬಹು ಕೋಟಿ ಅವ್ಯವಹಾರ ನಡೆಸಿದ್ದಾರೆ. ಹೀಗಾಗಿ, ಶೋಭಾ ಕರಂದ್ಲಾಜೆ ಹಾಗೂ ಒಟ್ಟು 12 ಜನ ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಖರೀದಿಯಲ್ಲಿ 20 ಸಾವಿರ ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಖರೀದಿ ಮಾಡಿದ್ದರು. ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಒಂದರ ಮಾರುಕಟ್ಟೆ ದರ 800 ರೂ. ಆದರೆ, ಬೆಸ್ಕಾಂ ನಿರ್ಧರಿಸಿದ ದರ 1,987 ರೂಪಾಯಿ. ಆದರೆ ಖರೀದಿ ಮಾಡಿರುವುದು 6,000 ರೂ. ಗೆ. ಇದರಿಂದ 4,013 ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಇದಲ್ಲದೆ, 49,000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಂದು ಕನೆಕ್ಟರ್ ಮಾರುಕಟ್ಟೆ ದರ 80, ಬೆಸ್ಕಾಂ ನಿಗದಿ ಮಾಡಿದ್ದು 152, ಖರೀದಿ ಆಗಿರುವುದು 855 ರೂಪಾಯಿಗೆ. ಇದರಲ್ಲಿ ಒಂದು ಕನೆಕ್ಟರ್ಗೆ 703 ರೂ. ವ್ಯತ್ಯಾಸ ಕಂಡುಬಂದಿದೆ. ಇನ್ನು, ಕೂಲಿ ನೀಡಿರುವುದರಲ್ಲೂ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಾಜಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ 12 ಅಧಿಕಾರಿಗಳ ವಿರುದ್ಧ ನೀತಿ ತಂಡದಿಂದ ಎಸಿಬಿಗೆ ದೂರು ನೀಡಲಾಗಿದೆ.